ADVERTISEMENT

ಹೆಬ್ಬಾಳ ಲೂಪ್‌: 15 ದಿನದಲ್ಲಿ ಪೂರ್ಣ

ಮಾನ್ಯತಾ ಟೆಕ್‌ ಪಾರ್ಕ್‌ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ– ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 16:15 IST
Last Updated 25 ನವೆಂಬರ್ 2025, 16:15 IST
ಹೆಬ್ಬಾಳ ಜಂಕ್ಷನ್‌ ಬಳಿ ನಿರ್ಮಿಸಿರುವ ನೂತನ ಪಥದಲ್ಲಿ ವಾಹನಗಳು ಸಂಚರಿಸಿದವು.
– ಪ್ರಜಾವಾಣಿ ಚಿತ್ರ
ಹೆಬ್ಬಾಳ ಜಂಕ್ಷನ್‌ ಬಳಿ ನಿರ್ಮಿಸಿರುವ ನೂತನ ಪಥದಲ್ಲಿ ವಾಹನಗಳು ಸಂಚರಿಸಿದವು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಲೂಪ್‌ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಹಲವು ಕಾಮಗಾರಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಹೆಬ್ಬಾಳ ಜಂಕ್ಷನ್‌ನಲ್ಲಿ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಕೆ.ಆರ್. ಪುರದ ಕಡೆಯಿಂದ ನಗರದೊಳಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಯನ್ನು ಬಿಡಿಎ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ, ಹೊಸ ಮೇಲ್ಸೇತುವೆ ಹಾಗೂ ಹಳೆಯ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ಲೂಪ್ ಕಾಮಗಾರಿ ಪ್ರಗತಿಯಲ್ಲಿದ್ದು, 15 ದಿನದಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ADVERTISEMENT

ಹೆಬ್ಬಾಳ ಮೇಲ್ಸೇತುವೆಯಲ್ಲಿ ಕೈಗೊಂಡಿರುವ ಹೊಸ ಲೂಪ್ ನಿರ್ಮಾಣ ಕಾಮಗಾರಿಯ ಮೊದಲ ಗರ್ಡರ್ ಈಗಾಗಲೇ ಅಳವಡಿಸಲಾಗಿದೆ, ಕಾಂಕ್ರೀಟ್ ಕೆಲಸ ಪ್ರಗತಿಯಲ್ಲಿದೆ. ಉಳಿದ ಎರಡು ಗರ್ಡರ್‌ಗಳ ಅಳವಡಿಕೆ ಕಾರ್ಯ ಕೈಗೊಂಡು ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾನ್ಯತಾ ಟೆಕ್‌ ಪಾರ್ಕ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೊ ಮಾರ್ಗ ಸಮೀಪದಲ್ಲಿ 1.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಈ ಕುರಿತು ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಯುತ್ತಿದ್ದು, ಅದನ್ನು ಶೀಘ್ರ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮಹೇಶ್ವರ್‌ ರಾವ್‌ ಹೇಳಿದರು.

ನಾಗವಾರ ಜಂಕ್ಷನ್ ಅಭಿವೃದ್ಧಿ: ನಾಗವಾರ ಜಂಕ್ಷನ್ ಬಳಿ ಐಬಿಸ್ ಹೋಟೆಲ್‌ನಿಂದ ನಾಗವಾರ ರಾಜಕಾಲುವೆಯವರೆಗೆ ಒಂದು ಕಿ.ಮೀ ಉದ್ದದಲ್ಲಿ ಜಲಮಂಡಳಿಯು ಒಳಚರಂಡಿ ಪೈಪ್‌ ಅಳವಡಿಸಬೇಕಿದ್ದು, ಇದಕ್ಕೆ ಉತ್ತರ ಸಂಚಾರ ವಿಭಾಗದಿಂದ ಅನುಮತಿ ದೊರೆತಿದೆ. ಪೂರ್ವ ಸಂಚಾರ ವಿಭಾಗದ ಅನುಮತಿ ಮಾತ್ರ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದರು. ಉತ್ತರ ಭಾಗದಿಂದ ಕೆಲಸ ಪ್ರಾರಂಭಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಮಹೇಶ್ವರ್‌ ತಿಳಿಸಿದರು.

ಟ್ಯಾನರಿ ರಸ್ತೆಯಿಂದ ನಾಗವಾರ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಶೀಘ್ರ ಮುಗಿಸಬೇಕು. ಜಂಕ್ಷನ್ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಹಾಕಿರುವ ಡಾಂಬರೀಕರಣ ಪದೇಪದೇ ಹಾಳಾಗುತ್ತಿರುವುದರಿಂದ, ಆ ಭಾಗದಲ್ಲಿ ‘ಎಂ60’ ಕಾಂಕ್ರೀಟ್ ಬಳಸಿ ದುರಸ್ತಿ ಮಾಡಲು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.