ADVERTISEMENT

ಒಪ್ಪಿಗೆಗೆ ಕಾಯುತ್ತಿದೆ ಬಿಎಂಆರ್‌ಸಿಎಲ್‌

ಹೆಬ್ಬಾಳ– ಸರ್ಜಾಪುರ ಮೆಟ್ರೊ ಮಾರ್ಗ l ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ

ಬಾಲಕೃಷ್ಣ ಪಿ.ಎಚ್‌
Published 27 ಆಗಸ್ಟ್ 2024, 0:30 IST
Last Updated 27 ಆಗಸ್ಟ್ 2024, 0:30 IST
ಹೆಬ್ಬಾಳ– ಸರ್ಜಾಪುರ ಮೆಟ್ರೊ ಮಾರ್ಗ
ಹೆಬ್ಬಾಳ– ಸರ್ಜಾಪುರ ಮೆಟ್ರೊ ಮಾರ್ಗ   

ಬೆಂಗಳೂರು: ‘ನಮ್ಮ ಮೆಟ್ರೊ’ ಹಂತ 3ಎ ಹೆಬ್ಬಾಳ–ಸರ್ಜಾಪುರ ಕಾರಿಡಾರ್‌ ನಿರ್ಮಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಒಪ್ಪಿಗೆಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

‘ನಮ್ಮ ಮೆಟ್ರೊ’ ಹಳೆಯ ಯೋಜನೆಗಳಲ್ಲಿ ಒಂದಾಗಿರುವ ಹೆಬ್ಬಾಳ–ಸರ್ಜಾಪುರ ಮಾರ್ಗಕ್ಕೆ (ಕೆಂಪು) ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌)ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಜೂನ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ.

ನಗರದ ಪ್ರಮುಖ ವಹಿವಾಟು ಪ್ರದೇಶಗಳಲ್ಲಿ ಒಂದಾಗಿರುವ ಕೋರಮಂಗಲವನ್ನು ಹಾದು ಹೋಗುವ ಈ ಮಾರ್ಗವು 17 ಎತ್ತರಿಸಿದ ಹಾಗೂ 11 ನೆಲದಡಿಯ ನಿಲ್ದಾಣಗಳನ್ನು ಹೊಂದಿರಲಿದೆ. ಹೆಬ್ಬಾಳ, ಗಂಗಾನಗರ ಮತ್ತು ಪಶು ವೈದ್ಯಕೀಯ ಕಾಲೇಜು ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ಇರಲಿದೆ. ಅಲ್ಲಿಂದ ಕೋರಮಂಗಲ ಮೂರನೇ ಬ್ಲ್ಯಾಕ್‌ ವರೆಗೆ 14.449 ಕಿ.ಮೀ. ಸುರಂಗ ಮಾರ್ಗವನ್ನು ಹೊಂದಿದೆ. ಅಲ್ಲಿಂದ ಮುಂದಕ್ಕೆ ಸರ್ಜಾಪುರವರೆಗೆ ಮತ್ತೆ ಎತ್ತರಿಸಿದ ಮಾರ್ಗ ಇರಲಿದೆ. 22.136 ಕಿ.ಮೀ. ಎತ್ತರಿಸಿದ ಮಾರ್ಗ ಸೇರಿ ಒಟ್ಟು 36.585 ಕಿ.ಮೀ. ಉದ್ದದ ಮಾರ್ಗ ಇದಾಗಿದೆ.

ADVERTISEMENT

ಎಂಟನೇ ಕಾರಿಡಾರ್‌: ಮೆಟ್ರೊ ಒಂದನೇ ಹಂತದಲ್ಲಿ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗ ನಿರ್ಮಾಣಗೊಂಡು ಕಾರ್ಯಾಚರಣೆಯಲ್ಲಿದೆ. ಹಂತ 2ರ ಕಾರಿಡಾರ್‌ಗಳಲ್ಲಿ ಹಳದಿ ಮಾರ್ಗ ಉದ್ಘಾಟನಾ ಹಂತಕ್ಕೆ ಬಂದಿದ್ದು, ಗುಲಾಬಿ ಮತ್ತು ನೀಲಿ ಮಾರ್ಗಗಳು ನಿರ್ಮಾಣ ಹಂತದಲ್ಲಿವೆ. ಹಂತ–3ರಲ್ಲಿ ಕೇಸರಿ ಮಾರ್ಗದ ಎರಡು ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದ್ದು, ಕಾಮಗಾರಿ ಆರಂಭಗೊಳ್ಳಲಿದೆ. ಹೆಬ್ಬಾಳ–ಸರ್ಜಾಪುರ ಮಾರ್ಗಕ್ಕೆ ಒಪ್ಪಿಗೆ ಸಿಕ್ಕಿದರೆ ಇದು ಎಂಟನೇ ಕಾರಿಡಾರ್‌ ಆಗಲಿದೆ.

ಈ ಕೆಂಪು ಮಾರ್ಗದಲ್ಲಿ ನಾಲ್ಕು ಇಂಟರ್‌ಚೇಂಜ್‌ಗಳು ಇರಲಿವೆ. ಹೆಬ್ಬಾಳದಲ್ಲಿ ಕೇಸರಿ ಮತ್ತು ನೀಲಿ ಮಾರ್ಗವನ್ನು ಸಂಪರ್ಕಿಸಲಿದೆ. ಕೆ.ಆರ್‌. ಸರ್ಕಲ್‌ನಲ್ಲಿ ನೇರಳೆ ಮಾರ್ಗವನ್ನು, ಡೇರಿ ಸರ್ಕಲ್‌ನಲ್ಲಿ ಗುಲಾಬಿ ಮಾರ್ಗವನ್ನು ಮತ್ತು ಅಗರದಲ್ಲಿ ಮತ್ತೆ ನೀಲಿ ಮಾರ್ಗವನ್ನು ಸಂಪರ್ಕಿಸುವುದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಅವಕಾಶ ಸಿಗಲಿದೆ. ನೀಲಿ ಮಾರ್ಗ ಸಂಪರ್ಕಿಸುವುದರಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವವರಿಗೆ ಅನುಕೂಲವಾಗಲಿದೆ.

ಹೆಬ್ಬಾಳ–ಸರ್ಜಾಪುರ ಮೆಟ್ರೊ ಮಾರ್ಗ ನಿರ್ಮಾಣ ಯೋಜನೆಯನ್ನು 2022ರಲ್ಲಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಎರಡು ವರ್ಷಗಳ ಬಳಿಕ ರಾಜ್ಯ ಸರ್ಕಾರಕ್ಕೆ ಡಿಪಿಆರ್‌ ಸಲ್ಲಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಒಪ್ಪಿಗೆ ಸಿಕ್ಕಿದರೆ ಕೇಂದ್ರಕ್ಕೆ

‘ಮೆಟ್ರೊ ಹಂತ ಮೂರರ ಜೆ.ಪಿ.ನಗರ ನಾಲ್ಕನೇ ಹಂತ–ಕೆಂಪಾಪುರ ಮತ್ತು ಹೊಸಹಳ್ಳಿ–ಕಡಬಗೆರೆ ಕಾರಿಡಾರ್‌ಗಳಿಗೆ ರಾಜ್ಯ ಸರ್ಕಾರವು ನವೆಂಬರ್‌ನಲ್ಲಿ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಎರಡು ವಾರದ ಹಿಂದೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 3–ಎ ಕಾರಿಡಾರ್‌ನ ಡಿಪಿಆರ್‌ ರಾಜ್ಯ ಸರ್ಕಾರದ ಹಂತದಲ್ಲಿದೆ. ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದ ಬಳಿಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದ ಬಳಿಕ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಂ. ಮಹೇಶ್ವರ ರಾವ್‌

ಅಂಕಿ ಅಂಶ 36.585 ಕಿ.ಮೀ. ಹೆಬ್ಬಾಳ–ಸರ್ಜಾಪುರ ಮಾರ್ಗದ ಉದ್ದ 28 ಒಟ್ಟು ನಿಲ್ದಾಣಗಳ ಸಂಖ್ಯೆ 4 ಇಂಟರ್‌ಚೇಂಜ್‌ಗಳ ಸಂಖ್ಯೆ ₹ 28405 ಕೋಟಿ ಯೋಜನೆಯ ಅಂದಾಜು ವೆಚ್ಚ

ಗ್ರಾಫಿಕ್ಸ್‌ಗೆ ಹೆಬ್ಬಾಳ ಗಂಗಾ ನಗರ ವೆಟರ್ನರಿ ಕಾಲೇಜು ಮೇಖ್ರಿ ಸರ್ಕಲ್ ಪ್ಯಾಲೇಸ್ ಗುಟ್ಟಹಳ್ಳಿ ಬೆಂಗಳೂರು ಗಾಲ್ಫ್ ಕೋರ್ಸ್‌ ಬಸವೇಶ್ವರ ಸರ್ಕಲ್ ಕೆ.ಆರ್ ಸರ್ಕಲ್ ಟೌನ್ ಹಾಲ್ ಶಾಂತಿನಗರ  ನಿಮ್ಹಾನ್ಸ್ ಡೇರಿ ಸರ್ಕಲ್‌ ಕೋರಮಂಗಲ 2ನೇ ಬ್ಲಾಕ್ ಕೋರಮಂಗಲ 3ನೇ ಬ್ಲಾಕ್ ಜಕ್ಕಸಂದ್ರ ಅಗರ ಇಬ್ಬಲೂರು ಬೆಳ್ಳಂದೂರು ಗೇಟ್‌ ಕೈಕೊಂಡ್ರಹಳ್ಳಿ ದೊಡ್ಡಕನ್ನೆಲ್ಲಿ ಕಾರ್ಮೆಲರಾಂ ಅಂಬೇಡ್ಕರ್ ನಗರ ಕೊಡತಿ ಗೇಟ್ ಮುತ್ತಾನಲ್ಲೂರು ಕ್ರಾಸ್ ದೊಮ್ಮಸಂದ್ರ ಸೋಂಪುರ ಕಾಡ ಅಗ್ರಹಾರ ರಸ್ತೆ ಸರ್ಜಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.