ಬೆಂಗಳೂರು: ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆಯಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯೆ ಶಹೀನ್ ಶಶಾ ತಿಳಿಸಿದರು.
‘ಸುರಂಗದಾಚೆ: ಉತ್ತಮ ಸಂಚಾರ ಮಾರ್ಗಗಳ ಹುಡುಕಾಟ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
₹ 17,697 ಕೋಟಿ ಖರ್ಚು ಮಾಡಿ 16.69 ಕಿ.ಮೀ. ಉದ್ದದ ಜೋಡಿ ಸುರಂಗ ರಸ್ತೆ ನಿರ್ಮಿಸುವ ಯೋಜನೆಯು ಸಂಚಾರ ದಟ್ಟಣೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯನ್ನಷ್ಟೇ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ವೈಜ್ಞಾನಿಕ ಯೋಜನೆ ಇದಲ್ಲ. ಈ ಹಿಂದೆ ಎತ್ತರಿಸಿದ ಕಾರಿಡಾರ್ ಯೋಜನೆಯನ್ನು ತರಲು ಸರ್ಕಾರ ತಂದಿತ್ತು. ನಾಗರಿಕರ ವಿರೋಧದದಿಂದ ಯೋಜನೆ ರದ್ದಾಗಿತ್ತು. ಪ್ರಸ್ತುತ ಇರುವ ಕೆಲವು ಎತ್ತರಿಸಿದ ಕಾರಿಡಾರ್, ಮೇಲ್ಸೇತುವೆ, ಕೆಳಸೇತುವೆ ರಸ್ತೆಗಳಲ್ಲಿ ಸ್ವಲ್ಪ ದೂರವಷ್ಟೇ ವೇಗವಾಗಿ ಪ್ರಯಾಣಿಸಬಹುದು. ನಿಯಮಿತ ರಸ್ತೆಗಳಿಗೆ ಬಂದ ಕೂಡಲೇ ಸಂಚಾರ ದಟ್ಟಣೆ ಪ್ರಾರಂಭವಾಗುತ್ತಿದೆ ಎಂದರು.
‘ನಗರದಲ್ಲಿ 1.25 ಕೋಟಿಯಷ್ಟು ಜನರಿದ್ದಾರೆ. ಒಂದು ಕೋಟಿ ಕಾರು, ಒಂದು ಕೋಟಿ ಬೈಕ್‌ಗಳಿವೆ. ಇಷ್ಟೊಂದು ವಾಹನಗಳು ಸಂಚರಿಸಲು ನಗರದಲ್ಲಿ ರಸ್ತೆಗಳು ಎಲ್ಲಿ ಸಾಕಾಗುತ್ತವೆ’ ಎಂದು ಪ್ರಶ್ನಿಸಿದರು.
ಸಂಚಾರ ದಟ್ಟಣೆ ನಿಯಂತ್ರಿಸಬೇಕೆಂದರೆ ಎಲ್ಲರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಬೇಕು. ಪ್ರಸ್ತುತ ನಗರದಲ್ಲಿ ಅಂದಾಜು 40 ಲಕ್ಷ ಜನ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಗೆ ಕೇವಲ 6 ಸಾವಿರ ಬಸ್‌ಗಳು ಮಾತ್ರ ಇವೆ. ಸಾರ್ವಜನಿಕ ಬಸ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.
ಸುರಂಗ ರಸ್ತೆಗೆ ₹17 ಸಾವಿರ ಕೋಟಿ ಖರ್ಚು ಮಾಡುವುದಕ್ಕಿಂತ, ಅದರ ಅರ್ಧಭಾಗ ವೆಚ್ಚ ಮಾಡಿ 10 ಸಾವಿರ ಬಸ್ ಖರೀದಿಸಿ ಜನರಿಗೆ ಸಮಯಕ್ಕೆ ಸರಿಯಾಗಿ, ಸುಲಭವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರೆ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿತ್ತು ಎಂದು ಹೇಳಿದರು.
ಸಂವಾದದಲ್ಲಿ ಐಐಎಸ್‌ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮ, ಫ್ರೈಡೇಸ್ ಫಾರ್ ಫ್ಯೂಚರ್ ಕರ್ನಾಟಕದ ಶ್ರೀನಿಧಿ, ಸಂಪ್ರೀತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.