ADVERTISEMENT

ಹೆಬ್ಬಾಳ-ಪಶು ಆರೋಗ್ಯ ಸಂಸ್ಥೆಯ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:27 IST
Last Updated 11 ಫೆಬ್ರುವರಿ 2019, 19:27 IST
ಪ್ರತಿಭಟನೆನಿರತ ನೌಕರರು
ಪ್ರತಿಭಟನೆನಿರತ ನೌಕರರು   

ಯಲಹಂಕ: ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಆಡಳಿತ ಮತ್ತು ಆರ್ಥಿಕ ಅನುದಾನವನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯಕ್ಕೆ(ಬೀದರ್)ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ, ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಸಂಘ ಮತ್ತು ಪರಿಶಿಷ್ಟ ಜಾತಿ-ಪಂಗಡದ ಬೋಧಕೇತರ ನೌಕರರ ಸಂಘದ ಸದಸ್ಯರು ಹಾಗೂ ನೌಕರರು ಕೆಲಸ ಬಹಿಷ್ಕರಿಸಿ, ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಆರಂಭಿಸಿದರು.

‘ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯನ್ನು 2006ರಲ್ಲಿ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸಲಾಗಿದೆ. ಆದರೆ ಇದುವರೆಗೂ ಸಂಸ್ಥೆಯ ಸಂಪೂರ್ಣ ಅನುದಾನವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸದೆ ನೇರವಾಗಿ ನೀಡುತ್ತಿರುವುದರಿಂದ ಪದೋನ್ನತಿ, ಮುಂಬಡ್ತಿ, ಸಾಮಾನ್ಯ ಜೇಷ್ಠತಾ ಪಟ್ಟಿ, ನೇಮಕಾತಿ ಮತ್ತಿತರ ವಿಶ್ವವಿದ್ಯಾಲಯದ ಸೇವಾಸೌಲಭ್ಯಗಳಿಂದ ನೌಕರರು ವಂಚಿತರಾಗಿದ್ದಾರೆ. ಇದರಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 210 ಅಧಿಕಾರಿಗಳು ಮತ್ತು ನೌಕರರ ಭವಿಷ್ಯ ಡೋಲಾಯಮಾನವಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

ಬೋಧಕೇತರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕುಮಾರ್ ಮಾತನಾಡಿ, ‘ಯಾವುದೇ ವಿಶ್ವವಿದ್ಯಾಲಯದಲ್ಲಿ ಏಕರೂಪದ ಆಡಳಿತ ಮತ್ತು ಆರ್ಥಿಕ ನಿರ್ವಹಣೆ ಮಾಡಬೇಕೆಂಬ ನಿಯಮವಿದ್ದರೂ ಅದನ್ನು ಇಲ್ಲಿ ಜಾರಿಗೊಳಿಸಿಲ್ಲ. ಸಂಸ್ಥೆಯ ಅನುದಾನವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಬೇಕು ಎಂದು ಕುಲಪತಿಗಳು ಈಗಾಗಲೆ ನಿರ್ದೇಶನ ನೀಡಿದ್ದರೂ, ಇದುವರೆಗೂ ಕಾರ್ಯಗತವಾಗಿಲ್ಲ’ ಎಂದು ದೂರಿದರು.

ADVERTISEMENT

ಪರಿಶಿಷ್ಟ ಜಾತಿ-ಪಂಗಡದ ಬೋಧಕೇತರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಶ್ರೀನಿವಾಸಮೂರ್ತಿ ಮಾತನಾಡಿ, ‘ಬೇಡಿಕೆ ಈಡೇರಿಕೆಗಾಗಿ 2006ರಿಂದಲೂ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆ ಆರಂಭಿಸಲಾಗಿದೆ. ಇನ್ನೂ ಸ್ಪಂದಿಸದಿದ್ದರೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.