ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ₹200 ಕೋಟಿ ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ಜೆ.ಸಿ. ನಗರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಹೆಬ್ಬಾಳ ಕ್ಷೇತ್ರದ ಪ್ರತಿಯೊಬ್ಬ ಬಡವರಿಗೆ ಸುಲಭ ಮತ್ತು ಉಚಿತವಾಗಿ ಚಿಕಿತ್ಸೆ ದೊರೆಯಬೇಕು ಎಂಬುದು ಸರ್ಕಾರದ ಆಶಯ. ಇಲ್ಲಿನ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ, ಜಯದೇವದಂತಹ ದೂರವಿರುವ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದಾರೆ’ ಎಂದು ಅವರು ತಿಳಿಸಿದರು.
‘ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣ, ಡಯಾಲಿಸಿಸ್, ಹೃದ್ರೋಗ, ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಚಿಕಿತ್ಸಾ ಸೌಲಭ್ಯಗಳಿರಲಿವೆ. ಶೀಘ್ರವೇ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
‘ಮುಖ್ಯಮಂತ್ರಿಯವರು ಆಸ್ಪತ್ರೆಗೆ ₹200 ಕೋಟಿಯಲ್ಲದೆ ಹೆಬ್ಬಾಳ ಕ್ಷೇತ್ರಕ್ಕೆ ಬರೋಬ್ಬರಿ ₹300 ಕೋಟಿ ಅನುದಾನ ನೀಡಿದ್ದಾರೆ. ಇದೇ ರೀತಿಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಅನುದಾನ ನೀಡಿದ್ದಾರೆ. ಆದರೆ, ಬಿಜೆಪಿಯವರು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.