ADVERTISEMENT

ಬೆಂಗಳೂರಲ್ಲಿ ಮಚ್ಚಿನ ಹುಚ್ಚು ಹಚ್ಚಿಸಿಕೊಂಡ ಫಾರಿನ್ ಪ್ರಜೆ ಪೊಲೀಸ್ ಅತಿಥಿ

ಡ್ರಗ್ಸ್ ನಶೆಯಲ್ಲಿದ್ದ ಐವರಿಕೋಸ್ಟ್ ಪ್ರಜೆಯ ಬಂಧನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 20:24 IST
Last Updated 7 ಫೆಬ್ರುವರಿ 2022, 20:24 IST
   

ಬೆಂಗಳೂರು: ಹೆಣ್ಣೂರು ಠಾಣೆ ಎದುರು ಮಚ್ಚು ಹಿಡಿದು ಕೂಗಾಡಿ ಪೊಲೀಸರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಓಕಾವೊ ಲಿಯಾನೊ ಎಂಬಾತನನ್ನು ಬಂಧಿಸಲಾಗಿದೆ.

‘ಐವರಿ ಕೋಸ್ಟ್ ಪ್ರಜೆಯಾದ ಓಕಾವೊ, ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಭಾನುವಾರ ಸಂಜೆ ಹೆಣ್ಣೂರು ಠಾಣೆಗೆ ಮಚ್ಚು ಹಿಡಿದು ಕೊಂಡು ಬಂದು, ಗಲಾಟೆ ಮಾಡಿದ್ದ. ಮಫ್ತಿಯಲ್ಲಿದ್ದ ಸಿಬ್ಬಂದಿ, ಆತನನ್ನು ಸುತ್ತುವರೆದು ಹಿಡಿದುಕೊಂಡಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ಹೇಳಿದರು.

‘ಆರೋಪಿಯನ್ನು ಸೆರೆ ಹಿಡಿದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋ‍ಪಿ ಡ್ರಗ್ಸ್ ನಶೆಯಲ್ಲಿ ಕೃತ್ಯ ಎಸಗಿರುವ ಅನುಮಾನವಿದೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬರಬೇಕಿದೆ’ ಎಂದೂ ತಿಳಿಸಿದರು.

ADVERTISEMENT

‘ನಿಮ್ಮನ್ನೆಲ್ಲ ಸಾಯಿಸುವೆ’ ಎಂಬುದಾಗಿ ಚೀರಾಡುತ್ತಿದ್ದ: ‘ಬ್ಯಾಗ್‌ನಲ್ಲಿ ಮಚ್ಚು ಇಟ್ಟುಕೊಂಡು ಠಾಣೆ ಬಳಿ ಬಂದಿದ್ದ ಆರೋಪಿ, ‘ನಿಮ್ಮನ್ನೆಲ್ಲ ಸಾಯಿಸುವೆ’ ಎಂದು ಚೀರಾಡಿದ್ದ. ಠಾಣೆ ಎದುರು ನಿಂತಿದ್ದ ಸಿಬ್ಬಂದಿ ಜೊತೆಯೇ ವಾಗ್ವಾದಕ್ಕೆ ಇಳಿದಿದ್ದ. ಅದೇ ಸಂದರ್ಭದಲ್ಲೇ ಬ್ಯಾಗ್‌ನಲ್ಲಿದ್ದ ಮಚ್ಚು ಹೊರಗೆ ತೆಗೆದು, ರೌಡಿಗಳ ರೀತಿಯಲ್ಲಿ ವರ್ತಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಿಡಿಯಲು ಹೋದ ಎಎಸ್‌ಐ ಮೇಲೆಯೇ ಆರೋಪಿ ಹಲ್ಲೆ ಮಾಡಿದ್ದ. ಮಫ್ತಿಯಲ್ಲಿದ್ದ ಸಿಬ್ಬಂದಿ, ಆತನನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದರು. ಮಚ್ಚು ಸಹ ಜಪ್ತಿ ಮಾಡಿದ್ದರು’ ಎಂದೂ ತಿಳಿಸಿವೆ.

‘ಬಂಧಿತ ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಆತ ಮಚ್ಚು ಹಿಡಿದು ಠಾಣೆಗೆ ಬಂದಿದ್ದು ಏಕೆ? ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆತನ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.