ADVERTISEMENT

ಯಡಿಯೂರಿ‌ನಲ್ಲಿ ಎರೆಹುಳು ಘಟಕ: ಇಲ್ಲಿ ಕೆ.ಜಿ.ಗೆ ₹ 40ಕ್ಕೆ ಸಿಗಲಿದೆ ಎರೆಹುಳ

ಯಡಿಯೂರು ವಾರ್ಡ್‌: ಎರೆಹುಳ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 11:09 IST
Last Updated 17 ಜೂನ್ 2020, 11:09 IST
ಎರೆಹುಳ ಘಟಕವನ್ನು ಉದ್ಘಾಟಿಸಿದ ಸಚಿವ ಆರ್‌.ಅಶೋಕ ಅವರು ಎರೆಹುಳಗಳ ತೊಟ್ಟಿಗೆ ನೀರು ಚಿಮುಕಿಸಿದರು. ಪಾಲಿಕೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ (ಎಡದಿಂದ ಮೂರನೆಯವರು), ಸಂಸದ ತೇಜಸ್ವಿಸೂರ್ಯ, ಎನ್‌.ಆರ್‌.ರಮೇಶ್‌ ಮತ್ತಿತರರು ಇದ್ದಾರೆ
ಎರೆಹುಳ ಘಟಕವನ್ನು ಉದ್ಘಾಟಿಸಿದ ಸಚಿವ ಆರ್‌.ಅಶೋಕ ಅವರು ಎರೆಹುಳಗಳ ತೊಟ್ಟಿಗೆ ನೀರು ಚಿಮುಕಿಸಿದರು. ಪಾಲಿಕೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ (ಎಡದಿಂದ ಮೂರನೆಯವರು), ಸಂಸದ ತೇಜಸ್ವಿಸೂರ್ಯ, ಎನ್‌.ಆರ್‌.ರಮೇಶ್‌ ಮತ್ತಿತರರು ಇದ್ದಾರೆ   

ಬೆಂಗಳೂರು: ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನಲ್ಲಿ ಹೊಸದಾಗಿ ಎರೆಹುಳ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿಬಿಬಿಎಂಪಿ ಎರೆಹುಳವನ್ನು ಪ್ರತಿ ಕೆ.ಜಿ.ಗೆ ₹ 40ರಂತೆ ಮಾರಾಟ ಮಾಡಲಿದೆ.

ಜಯನಗರ 6ನೇ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮಣ್ ರಾವ್ ಬುಲೇವಾರ್ಡ್‌ ‘ಡಿ’ ಉದ್ಯಾನದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವನ್ನು ಕಂದಾಯ ಸಚಿವ ಆರ್‌.ಅಶೋಕ ಬುಧವಾರ ಉದ್ಘಾಟಿಸಿದರು.

ಯಡಿಯೂರು ವಾರ್ಡ್‌ನಲ್ಲಿರಸ್ತೆಯ ಇಕ್ಕೆಲಗಳಲ್ಲಿ ಮತ್ತು 17 ಉದ್ಯಾನಗಳಲ್ಲಿ ಇರುವ ಸಾವಿರಾರು ಮರಗಳಿಂದ ಉದುರುವ ಒಣ ಎಲೆಗಳನ್ನು ಶೇಖರಿಸಿ, ಈ ‘ಎರೆಹುಳು ಘಟಕ’ದಲ್ಲಿ ಕಾಂಪೋಸ್ಟ್‌ ತಯಾರಿಸಲಾಗುತ್ತದೆ. ಈ ಸಲುವಾಗಿ ತಲಾ 17 ಸಾವಿರ ಲೀಟರ್‌ ಸಾಮರ್ಥ್ಯದ ಎರಡು ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ADVERTISEMENT

‘ತಲಾ 10 ಕೆ.ಜಿ. ತೂಕದಷ್ಟು ಎರೆಹುಳುಗಳನ್ನು ಅವುಗಳಲ್ಲಿ ಬಿಡಲಾಗುವುದು. ಇದರೊಂದಿಗೆ ಅಗತ್ಯ ಪ್ರಮಾಣದ ನೀರು ಮತ್ತು ಸಗಣಿಯನ್ನು ಬೆರೆಸಲಾಗುವುದು. 20 ರಿಂದ 25 ದಿನಗಳೊಳಗಾಗಿ ಎರೆಹುಳುಗಳು ಒಣ ಎಲೆಗಳನ್ನು ತಿಂದು ಸಾವಯವ ಗೊಬ್ಬರ ಉತ್ಪಾದಿಸುತ್ತವೆ. ಈ ಘಟಕದಲ್ಲಿ ಉತ್ಪತ್ತಿಯಾಗುವ ಗೊಬ್ಬರ ಹಾಗೂ ಎರೆಹುಳಗಳನ್ನು ಮಾರಾಟ ಮಾಡಲಾಗುತ್ತದೆ. ನಗರದ ಸುತ್ತಮುತ್ತಲಿನ ರೈತರಿಗೂ ಈ ಘಟಕ ಪ್ರಯೋಜನಕಾರಿಯಾಗಲಿದೆ’ ಎಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್‌ ತಿಳಿಸಿದರು.

‘ಪಾಲಿಕೆಯ 774 ಉದ್ಯಾನವನಗಳು ಹಾಗೂ ಲಾಲ್‌ಬಾಗ್ ಸಸ್ಯ ತೋಟ, ಕಬ್ಬನ್ ಉದ್ಯಾನ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಬಹಳಷ್ಟು ಉದ್ಯಾನಗಳಿಗೂ ಈ ಘಟಕದಿಂದ ಎರೆಹುಳು ಪೂರೈಕೆ ಮಾಡುವ ಉದ್ದೇಶವಿದೆ’ ಎಂದು ಬಿಬಿಎಂಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.