ADVERTISEMENT

ಪಾರಂಪರಿಕ ತಾಣ ದತ್ತು | ನಿರ್ವಹಣೆಗೆ ಸಹಕಾರಿ: ಸಚಿವ ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:40 IST
Last Updated 28 ಮೇ 2025, 16:40 IST
‘ನಮ್ಮ ಆರ್ಟ್‌ ಬೆಂಗಳೂರು’ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಕಲಾಪ್ರಿಯರು ಕಲಾಕೃತಿಗಳನ್ನು ವೀಕ್ಷಿಸಿದರು
-ಪ್ರಜಾವಾಣಿ ಚಿತ್ರ
‘ನಮ್ಮ ಆರ್ಟ್‌ ಬೆಂಗಳೂರು’ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಕಲಾಪ್ರಿಯರು ಕಲಾಕೃತಿಗಳನ್ನು ವೀಕ್ಷಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ, ನಿರ್ವಹಣೆಗೆ ಸಹಕಾರಿಯಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ‘ನಮ್ಮ ಆರ್ಟ್‌ ಬೆಂಗಳೂರು’ ರಾಷ್ಟ್ರೀಯ ಕಲಾ ಉತ್ಸವಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 25 ಸಾವಿರ ಪಾರಂಪರಿಕ ತಾಣಗಳಿದ್ದು, ಇವುಗಳೆಲ್ಲವನ್ನೂ ಸರ್ಕಾರವೇ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಿ, ಅಭಿವೃದ್ಧಿಪಡಿಸಲು ಕೈಗಾರಿಕೋದ್ಯಮಿಗಳು, ಟ್ರಸ್ಟ್‌, ಮಠಗಳು ‘ನಮ್ಮ ಸ್ಮಾರಕ ದತ್ತು ಯೋಜನೆ’ ಅಡಿಯಲ್ಲಿ ದತ್ತು ಪಡೆಯಬೇಕು’ ಎಂದು ಹೇಳಿದರು.

ADVERTISEMENT

‘ಸರ್ಕಾರ ರಾಜ್ಯದಲ್ಲಿರುವ ಸ್ಮಾರಕಗಳ ರಕ್ಷಣೆಗೆ ಬದ್ಧವಾಗಿದ್ದು, ಎಲ್ಲೆಡೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಉಳ್ಳವರು ಬಂದು ಕಲೆಯನ್ನು ಉಳಿಸಬೇಕು. ಅದಕ್ಕಾಗಿ ಪಾರಂಪರಿಕ ತಾಣಗಳನ್ನು ದತ್ತು ಪಡೆಯಬೇಕು’ ಎಂದರು.

‘ಚಿತ್ರಕಲಾ ಪರಿಷತ್‌ನ ಚಿತ್ರಸಂತೆ ಜಾಗತಿಕವಾಗಿ ಗಮನ ಸೆಳೆದಿದೆ. ಚಿತ್ರಸಂತೆಯಲ್ಲಿ ಒಮ್ಮೆ ಒಳಹೊಕ್ಕರೆ ಅಭಿರುಚಿ ಇಲ್ಲದವರೂ ಕಲೆಯಿಂದ ಪುಳಕಿತರಾಗಿ, ಆಕರ್ಷಣೆಗೆ ಒಳಗಾಗುತ್ತಾರೆ. ಕೊಲ್ಕತಾ ಹೊರತುಪಡಿಸಿದರೆ, ಬೆಂಗಳೂರಿನಲ್ಲಿ ಎಲ್ಲ ಬಗೆಯ ಕಲೆಗಳಿಗೂ ಆಸಕ್ತಿ ಇದೆ. ಇಂತಹ ರಾಷ್ಟ್ರೀಯ ಕಲಾ ಉತ್ಸವವನ್ನು ಆಯೋಜಿಸಿ, ದೇಶದ ಹಲವು ಭಾಗಗಳ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವುದು ಶ್ಲಾಘನಾರ್ಹ' ಎಂದು ಹೇಳಿದರು.

‘ನಮ್ಮ ಆರ್ಟ್‌ ಬೆಂಗಳೂರು– ರಾಷ್ಟ್ರೀಯ ಕಲಾ ಉತ್ಸವ ಜೂನ್‌ 1ರವರೆಗೆ ನಡೆಯಲಿದೆ. ಕಲಾವಿದರಿಂದ ಪ್ರಾತ್ಯಕ್ಷಿಕೆ, ಉಪನ್ಯಾಸ, ಸಂವಾದ, ಕಲಾಕೃತಿಗಳ ಪ್ರದರ್ಶನ, ಮಾರಾಟವಿರುತ್ತದೆ. ಕಲಾವಿದರು ಗ್ರಾಹಕರಿಗೆ ನೇರವಾಗಿ ಕಲಾಕೃತಿಗಳನ್ನು ಮಾರಾಟ ಮಾಡಬಹುದು’ ಎಂದು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ತಿಳಿಸಿದರು.

ದುಬೈನ ಹಲವು ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕೇರಳ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ನೂರಾರು ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಸಂಸ್ಕೃತಿ, ಹೆಣ್ಣಿನ ಭಾವ-ಭಂಗಿ, ಆಲದ ಮರದಡಿ ಕುಳಿತ ಜ್ಞಾನಿಗಳು, ಗ್ರಾಮೀಣ ಬದುಕು, ನಿಸರ್ಗ-ಕಡಲತೀರದ ಸೌಂದರ್ಯ, ಪುರಾಣದ ಬಹುತೇಕ ಪಾತ್ರಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ. ₹5 ಸಾವಿರದಿಂದ ₹5 ಲಕ್ಷದವರೆಗೆ ಕಲಾಕೃತಿಗಳ ದರ ಇದೆ.

ದೇಶ–ವಿದೇಶಗಳ ಕಲಾವಿದರ ಕಲಾಕೃತಿಗಳ ಪ್ರದರ್ಶನ
ದುಬೈನ ಹಲವು ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕೇರಳ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ನೂರಾರು ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಸಂಸ್ಕೃತಿ, ಹೆಣ್ಣಿನ ಭಾವ-ಭಂಗಿ, ಆಲದ ಮರದಡಿ ಕುಳಿತ ಜ್ಞಾನಿಗಳು, ಗ್ರಾಮೀಣ ಬದುಕು, ನಿಸರ್ಗ- ಕಡಲತೀರದ ಸೌಂದರ್ಯ, ಪುರಾಣದ ಬಹುತೇಕ ಪಾತ್ರಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ. ₹5 ಸಾವಿರದಿಂದ ₹5 ಲಕ್ಷದವರೆಗೆ ಕಲಾಕೃತಿಗಳ ದರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.