ADVERTISEMENT

ಹೆಸರಘಟ್ಟ: ನಾಲ್ಕು ವರ್ಷವಾದರೂ ಬಳಕೆಯಾಗದ ಅನುದಾನ

ಗ್ರಾಮಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:42 IST
Last Updated 23 ಜುಲೈ 2020, 19:42 IST
ಚಿಕ್ಕಬಾಣಾವರ ಗ್ರಾಮದಲ್ಲಿರುವ ಕೋಟೆ ಕಂದಕ ಸರ್ಕಾರಿ ಜಾಗ
ಚಿಕ್ಕಬಾಣಾವರ ಗ್ರಾಮದಲ್ಲಿರುವ ಕೋಟೆ ಕಂದಕ ಸರ್ಕಾರಿ ಜಾಗ   

ಹೆಸರಘಟ್ಟ: ಚಿಕ್ಕಬಾಣಾವರ ಗ್ರಾಮದಲ್ಲಿ ಅಂಗನವಾಡಿ ನಿರ್ಮಿಸಲು ನಾಲ್ಕು ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ನೀಡಿದ ಅನುದಾನ ಇನ್ನೂ ಬಳಕೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘2016-17ನೇ ಸಾಲಿನಲ್ಲಿ ಅಂಗನವಾಡಿ ನಿರ್ಮಿಸಲು ₹9.15 ಲಕ್ಷ ಅನುದಾನವನ್ನು ಸರ್ಕಾರವು ಮಂಜೂರು ಮಾಡಿತ್ತು.
ಅಂಗನವಾಡಿ ಕಟ್ಟಡ ನಿರ್ಮಿಸಿ ಕೊಡಲು ಕೆಆರ್‌ಐಡಿಎಲ್‌ಗೆ ಅದೇಶ ನೀಡಿತ್ತು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅನುದಾನ ಇನ್ನೂ ಬಳಕೆಯಾಗಿಲ್ಲ’ ಎಂದು ಗ್ರಾಮದ ನಿವಾಸಿ ಜಯರಾಮಯ್ಯ
ಬೇಸರ ವ್ಯಕ್ತಪಡಿಸಿದರು.

‘ಗ್ರಾಮದ ಕೋಟೆ ಮಾರಮ್ಮ ದೇವಸ್ಥಾನದ ಹಿಂಬದಿಯಲ್ಲಿ ಸರ್ಕಾರದ ಹತ್ತು ಗುಂಟೆ ಕೋಟೆ ಕಂದಕ ಜಾಗವಿದೆ. ಈ ಜಾಗದ ಸುತ್ತಮುತ್ತ ನೂರು ದಲಿತರ ಮನೆಗಳಿವೆ. ಇಲ್ಲಿ ಅಂಗನವಾಡಿ ನಿರ್ಮಾಣ ಮಾಡಿದರೆ ಪರಿಶಿಷ್ಟ ಜಾತಿಯವರ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಸಿಕ್ಕಂತೆ ಅಗುತ್ತದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಕಾಳಜಿ ತೋರಿಸುತ್ತಿಲ್ಲ’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿ ಬಳಿ ಇರುವ ಅಂಗನವಾಡಿಗೆ ಪ್ರತಿ ದಿನ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಡಬೇಕು. ನಮ್ಮ ಕೇರಿಗೆ ಅಂಗನವಾಡಿ ಕೊಡಿ ಎಂದು ಮಾಜಿ ಶಾಸಕರ ಮನೆಗೆ ಅಲೆದು ಸಾಕಾಯಿತು. ಅನುದಾನ ಬಂದರೂ ಅಂಗನವಾಡಿ ನಿರ್ಮಾಣ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕೇರಿಯ ಮಹಿಳೆ ನೀಲಮ್ಮ ಹನುಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯಲಹಂಕ ಸಿಡಿಪಿಒ ವಿಜಯಕುಮಾರ್ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.