ADVERTISEMENT

ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿದ ಪ್ರಕರಣ; ಗೌರವ್ ಗುಪ್ತ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 22:18 IST
Last Updated 17 ಮಾರ್ಚ್ 2022, 22:18 IST
   

ಬೆಂಗಳೂರು: ‘ನ್ಯಾಯಾಲಯದ ಆದೇಶ ಉಲ್ಲಂಘಿಸಿಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯಲಾಗುತ್ತಿದೆ’ ಎಂಬ ಆಕ್ಷೇಪಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬೇಷರತ್‌ ಕ್ಷಮೆ ಯಾಚಿಸಿದ ಪರಿಣಾಮ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಕೈ ಗೊಳ್ಳುವ ನಿರ್ಧಾರವನ್ನು ಹೈಕೋರ್ಟ್ ಕೈಬಿಟ್ಟಿದೆ.

‘ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವನ್ನು ಸಮಪರ್ಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ’ ಎಂದು ಆರೋಪಿಸಿ 2012ರಲ್ಲಿ ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಕಾರಣ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿ ಸಲಾಗುವುದು. ಕ್ರಮ ಕೈಗೊಳ್ಳುವ ಮುನ್ನ ಅವರು ತಮ್ಮ ವರ್ತನೆ ಬಗ್ಗೆ ವಿವರಣೆ ನೀಡಿ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸಲು ಹತ್ತು ದಿನ ಕಾಲಾವಕಾಶ ನೀಡಲಾಗುವುದು.ಪ್ರಮಾಣಪತ್ರ ಪರಿಶೀಲಿಸಿದ ಬಳಿಕ, ಅವರ ಮೇಲೆ ಕುರುಣೆ ತೋರಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ನ್ಯಾಯಪೀಠ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಗೌರವ್ ಗುಪ್ತ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ,‘ಪ್ರತಿವಾದಿಗಳು ಕೋರ್ಟ್ ಆದೇಶವನ್ನು ಜಾರಿಗೆ ತರುವ ಕಾರ್ಯ ಮುಂದುವರಿಸಬೇಕು. ಆದೇಶ ಪರಿಪಾಲನೆಗೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶಿಸಿದ ನ್ಯಾಯಪೀಠ ಮೂರು ವಾರಗಳ ಕಾಲ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.