ADVERTISEMENT

872 ಮರ ಉಳಿಸುವ ಸಾಧ್ಯತೆ ಪರಿಶೀಲಿಸಿ: ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 16:54 IST
Last Updated 22 ಜನವರಿ 2021, 16:54 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಾಗವಾರ–ಗೊಟ್ಟಿಗೆರೆ ಮಾರ್ಗದ ಮೆಟ್ರೊ ರೈಲು ಮಾರ್ಗಕ್ಕೆ 872 ಮರಗಳನ್ನು ಕಡಿಯುವ ಬಗ್ಗೆ ತಜ್ಞರ ಸಮಿತಿ ಮುಂದೆ ಅರ್ಜಿ ಸಲ್ಲಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ(ಬಿಎಂಆರ್‌ಸಿಎಲ್) ಹೈಕೋರ್ಟ್ ನಿರ್ದೇಶನ ನೀಡಿದೆ.

ಮರಗಳನ್ನು ಉಳಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅರಣ್ಯ ಇಲಾಖೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರನ್ನು ಒಳಗೊಂಡ ಸಮಿತಿಗೂ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

‘ಮಾರ್ಗದಲ್ಲಿ ಒಟ್ಟು 1,740 ಮರಗಳಿದ್ದು, ಅವುಗಳಲ್ಲಿ 872 ಮರಗಳು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ–1976ರ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಬಿಎಂಆರ್‌ಸಿಎಲ್‌ ಮಧ್ಯಂತರ ಅರ್ಜಿಯಲ್ಲಿ ತಿಳಿಸಿದೆ.

ADVERTISEMENT

‘ಪರಿಸರ ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಕರ್ತವ್ಯ. ತಜ್ಞರ ಸಮಿತಿಯ ಮುಂದೆ ಹೋಗಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ನಿಲುವು ಸ್ಪಷ್ಟಪಡಿಸಬೇಕು’ ಎಂದು ಹಿಂದಿನ ವಿಚಾರಣೆ ವೇಳೆ ಪೀಠ ತಿಳಿಸಿತ್ತು.

ಸಮಿತಿ ಮುಂದೆ ಅರ್ಜಿ ಸಲ್ಲಿಸಲು ಸಿದ್ಧವಿರುವುದಾಗಿ ಪೀಠಕ್ಕೆ ಬಿಎಂಆರ್‌ಸಿಎಲ್‌ ಶುಕ್ರವಾರ ಸ್ಪಷ್ಟಪಡಿಸಿತು. ‘ಮರಗಳು ಇರುವ ಸ್ಥಳಕ್ಕೆ ತೆರಳಿ ಸಮಿತಿ ಪರಿಶೀಲನೆ ನಡೆಸಬೇಕು. 872 ಮರಗಳು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿವೆಯೇ, ಇಲ್ಲವೇ ಎಂಬುದನ್ನು ಅವಲೋಕನ ಮಾಡಬೇಕು. ಇವುಗಳಲ್ಲಿ ಯಾವ ಮರಗಳನ್ನಾದರೂ ಉಳಿಸಲು ಸಾಧ್ಯವೇ ಎಂಬುದನ್ನೂ ಪರಿಶೀಲಿಸಬೇಕು’ ಎಂದು ಸಮಿತಿಗೆ ನಿರ್ದೇಶನ ನೀಡಿತು.

‘ಮೆಟ್ರೊ ಮಾರ್ಗಕ್ಕಾಗಿ ಉಳಿಸಲು ಸಾಧ್ಯವೇ ಆಗದ ಮರಗಳನ್ನು ಸ್ಥಳಾಂತರಿಸಲು ಸಾಧ್ಯವೇ ಎಂಬುದನ್ನೂ ಗಮನಿಸಿ ಫೆಬ್ರುವರಿ 15ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ಫೆ.17ಕ್ಕೆ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.