ADVERTISEMENT

ಮಾನಹಾನಿ ಪ್ರಕರಣ: ಪತ್ರಕರ್ತಗೆ 6 ತಿಂಗಳ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 1:01 IST
Last Updated 3 ಜೂನ್ 2022, 1:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ನಿವೃತ್ತ ಐಎಎಸ್ ಅಧಿಕಾರಿ ಬಿ.ಎ. ಹರೀಶ್ ಗೌಡ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ, ‘ಪಾರಿವಾಳ‘ ‍ವಾರಪತ್ರಿಕೆಯ ಸಂಪಾದಕ ಆರ್.ಕೆ.ರವಿಕುಮಾರ್ ಅವರಿಗೆ ಹೈಕೋರ್ಟ್‌, ಆರು ತಿಂಗಳ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿದೆ.

ರವಿಕುಮಾರ್‌ ಅವರಿಗೆ 5ನೇ ಹೆಚ್ಚು ವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ಒಂಬತ್ತು ತಿಂಗಳಿಗೆ ಏರಿಸಿದ್ದಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ನ್ಯಾಯ ಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಧಿಸಿದ್ದ ಶಿಕ್ಷೆಯನ್ನು ಕಾಯಂಗೊಳಿಸಿದೆ.

ಕೇಂದ್ರಕ್ಕೆ ಸಲಹೆ: ‘ಅಪರಾಧ ಪ್ರಕರಣದಲ್ಲಿ ದೋಷಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಕೋರಿ ಮೇಲ್ಮನವಿ ಸಲ್ಲಿಸಲು ಪ್ರಕರಣದ ಸಂತ್ರಸ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 372ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ಆರೋಪಿಗೆ ಕಡಿಮೆ ಶಿಕ್ಷೆ ವಿಧಿಸಿರುವುದನ್ನು ಆಕ್ಷೇಪಿಸಿ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಹಾಗಾಗಿ, ಮೇಲ್ಮನವಿ ಸಲ್ಲಿಸಲು ಸಂತ್ರಸ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿಆರ್‌ಪಿಸಿ ಕಲಂ 372ಕ್ಕೆ ತಿದ್ದುಪಡಿ ತರುವ ಅಗತ್ಯತೆಯನ್ನು ಕೇಂದ್ರ ಪರಿಗಣಿಸಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.

‘ನನ್ನ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಹರೀಶ್, ರವಿಕುಮಾರ್ ವಿರುದ್ಧ 2000ನೇ ಇಸ್ವಿಯಲ್ಲಿ ಪ್ರಕರಣ ದಾಖಲಿಸಿದ್ದರು.ಕೋರ್ಟ್‌ ರವಿ ಕುಮಾರ್‌ಗೆಆರು ತಿಂಗಳ ಜೈಲು ಶಿಕ್ಷೆ, ₹ 25 ಸಾವಿರ ದಂಡ ವಿಧಿಸಿ 2017ರ ಆಗಸ್ಟ್ 30ರಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.