
ಬೆಂಗಳೂರು: ‘ಬೀದಿ ಬದಿ ವ್ಯಾಪಾರಿಗಳು ಹಾಗೂ ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡ ನಿಯಮಗಳನ್ನು ಚಾಚೂ ತಪ್ಪದೆ ಅನುಸರಣೆ ಮಾಡುವ ಜತೆಗೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿಗಾ ಇರಿಸುವುದಕ್ಕೆ ಸೂಕ್ತ ಕಾರ್ಯ ವಿಧಾನವೊಂದನ್ನು ರೂಪಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
‘ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ’ ದ ಗೌರವ ಕಾರ್ಯದರ್ಶಿ ನಾಗರಾಜ ಧನ್ಯ ಮತ್ತು ‘ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ’ದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.
‘ಮನುಷ್ಯರ ಆರೋಗ್ಯಕ್ಕೆ ಎದುರಾಗುವ ಅಪಾಯಗಳ ಬಗ್ಗೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ನಿಯಮಗಳ ಅಡಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ರೆಸ್ಟೋರೆಂಟ್‌ಗಳಿಗೆ ತ್ರಿಪಕ್ಷೀಯ ಮಾರ್ಗಸೂಚಿಯೊಂದನ್ನು ರೂಪಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ.
‘ಅರ್ಜಿದಾರರು ಆಕ್ಷೇಪಿಸಿರುವ ನಿಬಂಧನೆಗಳನ್ನು ಅಸಂವಿಧಾನಿಕ ಎಂದು ನಿರ್ಣಯಿಸಿ ಅವುಗಳನ್ನು ರದ್ದುಗೊಳಿಸಲು ಯಾವುದೇ ಕಾರಣಗಳಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಏನಿದು ಅರ್ಜಿ?: ‘ಆಹಾರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ರೂಪಿಸಿ, ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಆಹಾರ ಸುರಕ್ಷಾ ಆಯುಕ್ತರು 2012ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದ್ದರು.
‘ಈ ಅಧಿಸೂಚನೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಂತ್ರಣ, (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು-2011, ಆಹಾರ ಸುರಕ್ಷತೆ ಮತ್ತು ಮಾನದಂಡಗಳು, ಆಹಾರ ಉತ್ಪನ್ನಗಳ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳ ನಿಯಮಗಳು-2011 ಮತ್ತು ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಕಾಯ್ದೆ-2006ರ 50 ರಿಂದ 65 ರವರೆಗಿನ ಕಲಂಗಳು ಅಸಾಂವಿಧಾನಿಕ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
‘ಮಾನದಂಡಗಳನ್ನು ಅನ್ವಯಿಸಲು ನಮಗೆ ಸಾಧ್ಯವಿಲ್ಲ’ ಎಂದು ಅರ್ಜಿದಾರರಾದ ಹೋಟೆಲ್ ಸಂಘಗಳು ಪ್ರತಿಪಾದಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.