ADVERTISEMENT

ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ಗೆ ಹೈಕೋರ್ಟ್‌ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 16:11 IST
Last Updated 21 ಡಿಸೆಂಬರ್ 2021, 16:11 IST
ಎಸ್.ಆರ್. ವಿಶ್ವನಾಥ್‌
ಎಸ್.ಆರ್. ವಿಶ್ವನಾಥ್‌   

ಬೆಂಗಳೂರು: ‘ಶಾಸಕ ಎಸ್.ಆರ್. ವಿಶ್ವನಾಥ್‌ ಅವರನ್ನುಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರನ್ನಾಗಿ ಮಾಡಿರುವ ನೇಮಕಾತಿ ರದ್ದುಪಡಿಸಬೇಕು’ ಎಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ವಿಶ್ವನಾಥ್ ಅವರಿಗೆ ಹ್ಯಾಂಡ್ ಸಮನ್ಸ್ (ಪೊಲೀಸ್‌ ಅಥವಾ ಕೋರ್ಟ್ ಮುಖಾಂತರ ನೀಡಲಾಗುವ ನೋಟಿಸ್ ಅನ್ನು ಸ್ವತಃ ಪಕ್ಷಗಾರರೇ ತಮ್ಮ ಪ್ರತಿವಾದಿಗೆ ತಲುಪಿಸುವುದು) ಮೂಲಕ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್, ‘ಅರ್ಜಿಯನ್ನು 2021ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಶ್ವನಾಥ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು. ಆದರೆ, ಆ ನೋಟಿಸ್ ಅವರಿಗೆ ತಲುಪಿಲ್ಲ. ಅವರು ಉದ್ದೇಶಪೂರ್ವಕವಾಗಿ ನೋಟಿಸ್ ಸ್ವೀಕರಿಸಿಲ್ಲ. ಹಾಗಾಗಿ, ಹ್ಯಾಂಡ್ ಸಮನ್ಸ್ ನೀಡಲು ಆದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಶ್ವನಾಥ್ ಅವರಿಗೆ ನೋಟಿಸ್ ಅನ್ನು ಹ್ಯಾಂಡ್ ಸಮನ್ಸ್ ಮೂಲಕ ಜಾರಿ ಮಾಡಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

‘ಎಸ್‌.ಆರ್‌. ವಿಶ್ವನಾಥ್ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗೆ ಬಿಡಿಎ ಅಧ್ಯಕ್ಷರಾಗುವ ಅರ್ಹತೆ ಇಲ್ಲ. ಆದ್ದರಿಂದ, ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಿ 2020ರ ನವೆಂಬರ್ 24ರಂದು ಹೊರಡಿಸಿದ ಆದೇಶ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.