ADVERTISEMENT

ಬಿಬಿಎಂಪಿ ಆಯುಕ್ತರ ಗೈರು: ಜಾಮೀನು ರಹಿತ ವಾರಂಟ್ ಹೊರಡಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 10:40 IST
Last Updated 2 ಏಪ್ರಿಲ್ 2019, 10:40 IST
   

ಬೆಂಗಳೂರು: ‘ನಾಕೋಡ ಕನ್ಸಟ್ರಕ್ಷನ್ ಕಂಪನಿಯ, ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ಕಟ್ಟಡದ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ ನೀಡಿಲ್ಲ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಹೈಕೋರ್ಟ್, ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಈ ಕುರಿತ ಪ್ರಕರಣವನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ಆದೇಶಿಸಿತ್ತು. ಆದರೆ, ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಆಯುಕ್ತರು ಚುನಾವಣೆ ಕಾರ್ಯದ ನಿಮಿತ್ತ ಹಾಜರಾಗುವುದು ತಡವಾಗಿದೆ. ಆದ್ದರಿಂದ ಸಮಯಾವಕಾಶ ನೀಡಬೇಕು. ಕೋರ್ಟ್‌ಗೆ ಬರುತ್ತಾರೆ’ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ನ್ಯಾಯಪೀಠ ವಕೀಲರ ಮನವಿಯನ್ನು ತಳ್ಳಿಹಾಕಿತು.

ADVERTISEMENT

‘ಬಿಬಿಎಂಪಿ ಆಯುಕ್ತರನ್ನು ಕೋರ್ಟ್‌ಗೆ ಹಾಜರು ಪಡಿಸಿ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಏ.3) ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.