ADVERTISEMENT

ಪತಿ ಸುಪರ್ದಿಗೆ ಮಗು ಒಪ್ಪಿಸದ ಮಹಿಳೆಗೆ ಜಾಮೀನು ರಹಿತ ವಾರಂಟ್‌

ಪ್ರಿಯಕರನ ಮೋಹದಲ್ಲಿ ಪುತ್ರನ ಕಡೆಗಣನೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2023, 21:53 IST
Last Updated 28 ಏಪ್ರಿಲ್ 2023, 21:53 IST
   

ಬೆಂಗಳೂರು: ಪತಿ–ಪತ್ನಿ ಮಧ್ಯದ ಕೌಟುಂಬಿಕ ವ್ಯಾಜ್ಯವೊಂದರಲ್ಲಿ, ‘ನ್ಯಾಯಾಲಯದ ಆದೇಶದ ಹೊರತಾಗಿಯೂ ಪತ್ನಿ ಮಗುವನ್ನು ನನ್ನ ಸುಪರ್ದಿಗೆ ನೀಡಿಲ್ಲ’ ಎಂಬ ಪತಿಯ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ಕೋರ್ಟ್‌ ಆದೇಶ ಪಾಲಿಸದ ಅರ್ಜಿದಾರರ ಪತ್ನಿಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಆದೇಶಿಸಿದೆ.

ಈ ಕುರಿತಂತೆ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನೀಲ್ ದತ್ ಯಾದವ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, ‘ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ಅರ್ಜಿದಾರರ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

‘ಮಹಿಳೆಯನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಮಗುವೂ ಜೊತೆಯಲ್ಲಿರುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಕೋರ್ಟ್‌ನ ಹೊರಭಾಗದಲ್ಲಿ ಅರ್ಜಿದಾರರ ಪತ್ನಿಯನ್ನು ಬಂಧಿಸಿದ್ದೇ ಆದರೆ, ಮಗುವನ್ನು ಕೋರ್ಟ್‌ ಹಾಲ್‌ ಒಳಗೆ ಕರೆತರುವಾಗ ಪೊಲೀಸರು ಎಲ್ಲ ರೀತಿಯ ಸುರಕ್ಷತೆ ಮತ್ತು ಕಾಳಜಿಯುಕ್ತ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿದೆ.

ADVERTISEMENT

ಅತೃಪ್ತಿ: ‘ಅಪ್ರಾಪ್ತ ವಯಸ್ಸಿನ ಮಗುವನ್ನು ಅರ್ಜಿದಾರ ಪತಿಯ ಸುಪರ್ದಿಗೆ ನೀಡುವಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪತ್ನಿ ಪಾಲಿಸಿಲ್ಲ. ಆಕೆ ಕೋರ್ಟ್ ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಠಿಣ ಕ್ರಮ ಕೈಗೊಳ್ಳದ ಹೊರತು ಆಕೆ ನ್ಯಾಯಾಲಯದ ಮುಂದೆ ಹಾಜರಾಗುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಲುಕ್‌ ಔಟ್‌ ನೋಟಿಸ್‌: ವಿಚಾರಣೆ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ವಿ.ಎಸ್. ಹೆಗ್ಡೆ, ‘ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂಬುದು ಅರ್ಜಿದಾರರ ಪತ್ನಿಗೆ ಗೊತ್ತಿದ್ದೂ, ಆಕೆ ಕೋರ್ಟ್‌ಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ತಾನಿದ್ದ ಮನೆ ಖಾಲಿ ಮಾಡಿದ್ದಾರೆ. ಕಚೇರಿಯಲ್ಲೂ ಲಭ್ಯವಾಗಿಲ್ಲ. ಸದ್ಯಕ್ಕೀಗ ಆಕೆ ದೆಹಲಿಯಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ  ಪ್ರಕರಣದ ಕುರಿತಂತೆ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಗೆ ಮಾಹಿತಿ ಒದಗಿಸಲಾಗಿದ್ದು, ಲುಕ್‌ ಔಟ್ ನೋಟಿಸ್ ಅನ್ನೂ ಜಾರಿಗೊಳಿಸಲಾಗಿದೆ’ ಎಂದು ವಿವರಿಸಿದರು.

ಈ ಅಂಶಗಳನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮಹಿಳೆಯು ಕರ್ನಾಟಕದ ವ್ಯಾಪ್ತಿಯಿಂದ ಹೊರಗಿದ್ದರೆ ಸಂಬಂಧಿಸಿದ ಪೋಲೀಸರು ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರಂಟ್ ಜಾರಿಗೆ ಸಹಕರಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣವೇನು?: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆಸುತ್ತಿರುವ ಪತಿ, ‘ನನ್ನ ಪತ್ನಿಯ ಬಳಿಯಿರುವ ಮಗನನ್ನು ನನ್ನ ಸುಪರ್ದಿಗೆ ಒಪ್ಪಿಸುವಂತೆ ಪತ್ನಿಗೆ ನಿರ್ದೇಶಿಸಬೇಕು’ ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ, ‘ಒಂದು ತಿಂಗಳಲ್ಲಿ ಮಗನನ್ನು ಪತಿಯ ವಶಕ್ಕೆ ನೀಡಬೇಕು‘ ಎಂದು ಪತ್ನಿಗೆ 2022ರ ಮಾರ್ಚ್ 3ರಂದು ನಿರ್ದೇಶಿಸಿತ್ತು. ಆದರೆ, ಮಗನನ್ನು ತನ್ನ ಸುಪರ್ದಿಗೆ ನೀಡದ ಹಿನ್ನೆಲೆಯಲ್ಲಿ ಪತಿ, ಪತ್ನಿಯ ವಿರುದ್ಧ ಅಕ್ರಮ ಬಂಧನ ಆರೋಪದಡಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌, ‘ಪತ್ನಿಯು ಮಗನ ಯೋಗಕ್ಷೇಮಕ್ಕಿಂತ ತನ್ನ ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ’ ಎಂಬ ಅರ್ಜಿದಾರ ಪತಿಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿತ್ತು. ‘ಇಂತಹ ಪ್ರಕರಣಗಳಲ್ಲಿ ಮಗುವಿನ ನೆಮ್ಮದಿ ಮತ್ತು ಭಾವನಾತ್ಮಕ ಅಂಶಗಳು ಮಾತ್ರವೇ ಮುಖ್ಯವಾಗುವುದಿಲ್ಲ. ಅದು ಬೆಳೆಯುವ ವಾತಾವರಣ ಮತ್ತು ತನ್ನ ಸುತ್ತಲಿನ ಪರಿಸರದಿಂದ ಕಲಿಯಬಹುದಾದ ನೈತಿಕ ಮೌಲ್ಯಗಳ ಅರಿವೂ ಕೂಡಾ ಆದ್ಯತೆ ಪಡೆಯುತ್ತವೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ‘ಮಗುವನ್ನು ಪತಿಯ ಸುಪರ್ದಿಗೆ ಒಪ್ಪಿಸಬೇಕು‘ ಎಂದು 2023ರ ಜನವರಿ 31ರಂದು ಪತ್ನಿಗೆ ಆದೇಶಿಸಿತ್ತು. 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.