ADVERTISEMENT

ಭೂ ಕಬಳಿಕೆ ಕೋರ್ಟ್‌ ಸಿಂಧುತ್ವ ಪ್ರಶ್ನೆ: ಆ.5ಕ್ಕೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:23 IST
Last Updated 8 ಜುಲೈ 2019, 20:23 IST

ಬೆಂಗಳೂರು: ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ನೂರಾರು ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್‌ ಆಗಸ್ಟ್‌ 5ಕ್ಕೆ ನಿಗದಿಪಡಿಸಿದೆ.

ಈ ಕುರಿತ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಸರ್ಕಾರಿ ಭೂಮಿ ಕಬಳಿಕೆ ಕುರಿತಂತೆ ಡಾ.ಬಾಲಸುಬ್ರಮಣ್ಯಂ ಮತ್ತು ಎ.ಟಿ.ರಾಮಸ್ವಾಮಿ ಸಮಿತಿಯ ವರದಿಗಳ ಪ್ರತಿಯನ್ನು ಪ್ರತಿವಾದಿಗಳಿಗೆ ನೀಡಬೇಕು’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಡಿ.ನಾಗರಾಜ್‌, ‘ಈ ಪ್ರಕರಣದಲ್ಲಿ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಬೇಕಿರುವುದರಿಂದ ಸಮಯಾವಕಾಶ ಬೇಕು’ ಎಂದು ಕೋರಿದರು. ಇದನ್ನು ಮನ್ನಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ADVERTISEMENT

ಆಕ್ಷೇಪ: ‘ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ರಚನೆ ಕಾನೂನು ಬಾಹಿರ. ಈ ಮೂಲಕ ಸರ್ಕಾರ ಸುಪ್ರೀಂಕೋರ್ಟ್ ತೀರ್ಪುಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.