ADVERTISEMENT

ರಸ್ತೆಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಪೊಲೀಸರ ಎನ್‌ಒಸಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 20:28 IST
Last Updated 27 ಸೆಪ್ಟೆಂಬರ್ 2019, 20:28 IST
   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ನೀಡುವ ಮುನ್ನ ಸಂಚಾರ ಪೊಲೀಸರಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಬಸವನಗುಡಿಯ ತ್ಯಾಗರಾಜ ನಗರದ ಪಾಂಡುರಂಗ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಕರ್ನಾಟಕ ಪೌರಾಡಳಿತ ಕಾಯ್ದೆ–1976 ಕಲಂ 288 (2)ರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ರಸ್ತೆಗಳಲ್ಲಿ ತಾತ್ಕಾಲಿಕ ಪೆಂಡಾಲ್ ಹಾಕಲು ಬಿಬಿಎಂಪಿ ಅನುಮತಿ ನೀಡಬಹುದು. ಆದರೆ, ಪರವಾನಗಿ ನೀಡುವ ಮೊದಲು ಆಯುಕ್ತರು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ರಸ್ತೆ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ವ್ಯಾಪಾರ ನಿಯಂತ್ರಣ ಕಾಯ್ದೆ–2014ರ ಅನ್ವಯ ರಸ್ತೆ ಬದಿಗಳ ವ್ಯಾಪಾರ ನಿಯಂತ್ರಿಸಬೇಕು. ಈ ವ್ಯಾಪಾರಿಗಳಿಂದ ಸಾರ್ವಜನಿಕರ ಓಡಾಟಕ್ಕೆ ಯಾವುದೇ ಅಡ್ಡಿ ಆಗದಂತೆ ಕ್ರಮ ಜರುಗಿಸಬೇಕು’ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.