ADVERTISEMENT

ಮಸೀದಿಗಳಲ್ಲಿ ಪ್ರಾರ್ಥನೆ: ಕೇಂದ್ರದ ಆದೇಶ ಪಾಲಿಸಲು ಹೈಕೋರ್ಟ್ ತಾಕೀತು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 21:03 IST
Last Updated 31 ಮಾರ್ಚ್ 2020, 21:03 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ‘ಮಸೀದಿಗಳಲ್ಲಿ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಯಂತ್ರಿಸುವ ಬಗ್ಗೆ ವಕ್ಫ್ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತು ನಿರ್ದೇಶನ ನೀಡಿದೆ.

‘ಕೊರೊನಾ ಸೋಂಕು ಹರಡುವುದನ್ನು ತಡೆಯುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಮಾರ್ಚ್ 24ರಂದು ಎಲ್ಲಾ ವಿದಧ ಧಾರ್ಮಿಕ ಆರಾಧನೆಯ ಜಮಾವಣೆ ಪ್ರತಿಬಂಧಿಸಿ ಮತ್ತು ಎಲ್ಲಾ ಆರಾಧನಾ ಸ್ಥಳಗಳನ್ನು ಬಂದ್ ಮಾಡಲು ನಿರ್ದೇಶಿಸಿದೆ. ನಿರ್ದೇಶನವನ್ನು ರಾಜ್ಯ ವಕ್ಫ್ ಮಂಡಳಿ ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

ADVERTISEMENT

ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿದರು.

**
ಏ.14ರವರೆಗೂ ಮದ್ಯ ಬಂದ್
ಬೆಂಗಳೂರು:
ರಾಜ್ಯದಲ್ಲಿ ಏಪ್ರಿಲ್ 14ರವರೆಗೂ ಮದ್ಯ ಮಾರಾಟ ನಿಷೇಧಿಸಿ ಅಬಕಾರಿ ಇಲಾಖೆ ‌ಆದೇಶ ಹೊರಡಿಸಿದೆ.

ಈ ಹಿಂದಿನ ಆದೇಶದಲ್ಲಿ ಮಾ.31ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಘೋಷಣೆ ಆಗಿರುವ ಲಾಕ್‌ಡೌನ್ ಮುಗಿಯುವ ತನಕ ಮದ್ಯ ಮಾರಾಟ ನಿಷೇಧ ಮುಂದುವರಿಸಲಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

**
ಯುವಕರಿಂದ ಪೊಲೀಸರಿಗೆ ಅಕ್ಕಿ ವಿತರಣೆ
ಯಲಹಂಕ:
ಹಗಲಿರುಳು ಕರ್ತವ್ಯನಿರ್ವಹಿಸುವ ಪೊಲೀಸರಿಗೆ ಊಟದ ಸಮಸ್ಯೆಯಾಗಬಾರದೆಂದು ಬ್ಯಾಟರಾಯನಪುರದ ಯುವಕರು ಕೊಡಿಗೇಹಳ್ಳಿ ಠಾಣೆಯ ಸಿಬ್ಬಂದಿಗೆ ಅಕ್ಕಿ ಚೀಲಗಳನ್ನು ವಿತರಿಸಿದರು.

ಠಾಣೆಯಲ್ಲಿ ಒಟ್ಟು 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಅಡುಗೆ ತಯಾರಿಸಲು ನೆರವಾಗುವ ಉದ್ದೇಶದಿಂದ ಯುವಕರಾದ ಮನಮೋಹನ್, ಪ್ರದೀಪ್ ಹಾಗೂ ಸುರೇಶ್ ಅವರು, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ ಅವರಿಗೆ ಅಕ್ಕಿ ಚೀಲಗಳನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಭೀಮಾಶಂಕರ್, ‘ಕೊಡಿಗೇಹಳ್ಳಿ ಮತ್ತು ವಿದ್ಯಾರಣ್ಯಪುರ ಠಾಣೆಗಳ ವತಿಯಿಂದ ತಿಂಡ್ಲು ವೃತ್ತದಲ್ಲಿ ಆರಂಭಿಸಿರುವ ಸಮುದಾಯ ಅಡುಗೆಮನೆಗೆ ಈ ಅಕ್ಕಿಯನ್ನು ತಲುಪಿಸಲಾಗುವುದು. ಅಲ್ಲಿ ಪೊಲೀಸರು ಮತ್ತು ಆ ಭಾಗದ ದಿನಗೂಲಿ ನೌಕರರು ನಿತ್ಯ ಊಟ ಮಾಡುತ್ತಾರೆ‘ ಎಂದು ತಿಳಿಸಿದರು.

ವಾಹನಗಳ ವಶ: ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ ಒಟ್ಟು 534 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

**
‘ಪರಿಸ್ಥಿತಿ ಲಾಭಕ್ಕೆ ಮುಂದಾದರೆ ಕ್ರಮ’
ಯಲಹಂಕ:
‘ಲಾಕ್‌ಡೌನ್‌ ಸನ್ನಿವೇಶದ ಲಾಭ ಪಡೆಯಲು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ವರ್ತಕರು ನಿಗದಿತ ದರಕ್ಕಿಂತಲೂ ಅತಿಹೆಚ್ಚಿನ ಬೆಲೆಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದರೆ, ಅಂಥವರ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ಎಚ್ಚರಿಸಿದರು.

ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡುವುದರ ವಿರುದ್ಧ ವಹಿಸಬಹುದಾದ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲ ಗ್ರಾಮಗಳು ಹಾಗೂ ಪಟ್ಟಣಗಳಲ್ಲಿ ಮೆಡಿಕಲ್ ಶಾಪ್‌ಗಳನ್ನು ತೆರೆದಿಡಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.