ಕೆ.ಎಸ್. ಈಶ್ವರಪ್ಪ
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪಾಸ್‌ಪೋರ್ಟ್ ನವೀಕರಣ ಮಾಡುವಂತೆ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶಿಸಿದ್ದು, ಹೈಕೋರ್ಟ್ ಈ ಸಂಬಂಧ ಈಶ್ವರಪ್ಪ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
‘ನನ್ನ ಪಾಸ್‌ಪೋರ್ಟ್ ನವೀಕರಿಸಲು ನಿರ್ದೇಶಿಸಬೇಕು’ ಎಂದು ಕೋರಿ ಈಶ್ವರಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್, ‘ಅರ್ಜಿದಾರರ ವಿರುದ್ಧದ ಏಳು ಕ್ರಿಮಿನಲ್ ಪ್ರಕರಣಗಳಲ್ಲಿ ಐದು ವಿಚಾರಣೆಗೆ ಬಾಕಿ ಇವೆ. ಇದರಿಂದ ನವೀಕರಣಕ್ಕೆ ತಕರಾರು ತೆಗೆಯಲಾಗುತ್ತಿದ್ದು, ಪೊಲೀಸ್ ಪರಿಶೀಲನೆ ವಿಳಂಬವಾಗುತ್ತಿದೆ. ಆದ್ದರಿಂದ, ಪಾಸ್‌ಪೋರ್ಟ್ ನವೀಕರಿಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಕೆಲವು ಷರತ್ತುಗಳನ್ನು ವಿಧಿಸಿ ಒಂದು ವರ್ಷದವರೆಗೆ ಪಾಸ್‌ಪೋರ್ಟ್ ನವೀಕರಿಸಲು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶಿಸಿತು. ‘ದೇಶದಿಂದ ಹೊರಗೆ ಹೋಗುವಾಗ ಕೋರ್ಟ್‌ಗೆ ಪ್ರವಾಸದ ವಿವರವನ್ನು ಸ್ಥಳೀಯ ಸಕ್ಷಮ ಪ್ರಾಧಿಕಾರಕ್ಕೆ ಒದಗಿಸಬೇಕು. ವಿದೇಶದಿಂದ ಬಂದ ನಂತರವೂ ಕೋರ್ಟ್‌ಗೆ ಮಾಹಿತಿ ನೀಡಬೇಕು’ ಎಂದು ನ್ಯಾಯಪೀಠ ಅರ್ಜಿದಾರರಿಗೆ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.