ADVERTISEMENT

ಅಕ್ರಮ ವಿದೇಶಿಯರನ್ನು ಹೊರದಬ್ಬಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 17:55 IST
Last Updated 28 ಜನವರಿ 2026, 17:55 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಂಡ ಮತ್ತು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿರುವ ವಿದೇಶಿಯರನ್ನು ಕೂಡಲೇ ಅವರವರ ದೇಶಕ್ಕೆ ಗಡಿಪಾರು ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ಮಾಡಿದೆ.

‘ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮ್ಯಾಜಿಸ್ಟ್ರೇಟ್‌ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಪಶ್ಚಿಮ ಆಫ್ರಿಕಾದ ಘಾನಾ ದೇಶದ ಮಹಿಳೆ ಯೆಬೊಹಾ ಬೆನೆಡಿಕ್ಟಾ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ‘ಆರೋಪಿಯಿಂದ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್‌ ವಶಪಡಿಸಿಕೊಳ್ಳಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಯಾಗಿ ಆರೋಪಿ ಪರ ವಕೀಲರು, ‘ಪೊಲೀಸರು ಅರ್ಜಿದಾರರ ಬಂಧನಕ್ಕೆ ಕಾರಣಗಳನ್ನು ಒದಗಿಸಿಲ್ಲ ಹಾಗೂ ಬಂಧನದ ಕಾರಣಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ನೀಡಿಲ್ಲ. ಹಾಗಾಗಿ, ಅರ್ಜಿದಾರರನ್ನು ಬಿಡುಗಡೆಗೊಳಿಸಲು ಮಧ್ಯಂತರ ಆದೇಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ಪ್ರಕರಣದಲ್ಲಿ ಆರೋಪಿಯ ಮನೆಯಿಂದ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್‌ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. 400 ಗ್ರಾಂ ಎಂಡಿಎಂಎ ಅಂದರೆ ಸುಮಾರು 4 ಸಾವಿರ ವಿದ್ಯಾರ್ಥಿಗಳನ್ನು ಹಾಳು ಮಾಡಬಲ್ಲದು.
– ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಈ ಮನವಿಗೆ ಕೆರಳಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಏಕೆ ಬಂಧಿಸಲಾಗಿದೆ ಎಂಬುದು ಆರೋಪಿಗೆ ಗೊತ್ತಿದೆಯಲ್ಲವೇ? ಅದಕ್ಕೆ ಕಾರಣವನ್ನು ಬಿಡಿಸಿ ಬೇರೆ ಹೇಳಬೇಕೆ? ಬಂಧನಕ್ಕೆ ಕಾರಣ ನೀಡಿಲ್ಲ ಎಂಬ ಆಧಾರದಲ್ಲಿ ಆರೋಪಿಯ ಬಿಡುಗಡೆಗೆ ಆದೇಶಿಸುವಂತೆ ಕೋರಬೇಡಿ. ನಾನು ಇಂತಹ ಮನವಿಯನ್ನು ಒಪ್ಪಿ ಆದೇಶ ಮಾಡುವುದಿಲ್ಲ. ಬಿಡುಗಡೆ ಆದೇಶ ಬೇಕಿದ್ದರೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ಕಟುವಾಗಿ ನುಡಿದರು.

ಪ್ರಕರಣವೇನು?: ಅರ್ಜಿದಾರರು ಸಂಜಯನಗರದ ಸಪ್ತಗಿರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದರು. ಸಂಜಯನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಎ.ರವಿ ನೀಡಿದ್ದ ಮಾಹಿತಿ ಆಧರಿಸಿ ಯಲಹಂಕ ನ್ಯೂ ಟೌನ್‌ ಠಾಣಾ ಪೊಲೀಸರು ಅರ್ಜಿದಾರರ ಮನೆಯ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ ಅರ್ಜಿದಾರ ಮಹಿಳೆ ಹಾಗೂ ಮತ್ತೊಬ್ಬ ಆರೋಪಿಯಿಂದ 700 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತಂತೆ ಅವರ ಸ್ವಇಚ್ಛಾ ಹೇಳಿಕೆ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು 2025ರ ಸೆಪ್ಟೆಂಬರ್ 3ರಂದು ಬಂಧಿಸಿ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.

ಜೈಲಿನಲ್ಲಿ ಏಕೆ ಇಟ್ಟುಕೊಂಡಿದ್ದೀರಿ?

‘ಇಂತಹ ಆರೋಪಿಗಳನ್ನು ಜೈಲಿನಲ್ಲಿ ಏಕೆ ಇಟ್ಟುಕೊಂಡಿದ್ದೀರಾ? ಕೂಡಲೇ ಅವರನ್ನು ಸ್ವದೇಶಕ್ಕೆ ಗಡಿಪಾರು ಮಾಡಬೇಕಲ್ಲವೇ? ಎಂದು ನ್ಯಾಯಮೂರ್ತಿಗಳು ಪ್ರಾಸಿಕ್ಯೂಷನ್ ಅನ್ನು ಕಟುವಾಗಿ ಪ್ರಶ್ನಿಸಿದರು. ‘ಪಾಸ್‌ಪೋರ್ಟ್‌ ಅವಧಿ ಮುಗಿದ ವಿದೇಶಿಯರನ್ನು ಪತ್ತೆ ಹಚ್ಚಿ ಕೂಡಲೇ ಅವರ ದೇಶಕ್ಕೆ ಗಡಿಪಾರು ಮಾಡಬೇಕು. ಇಲ್ಲವಾದರೆ ಇಂಥವರೆಲ್ಲಾ ಮಾದಕ ದ್ರವ್ಯ ಸಂಗ್ರಹಣೆ ಅಥವಾ ಮಾರಾಟ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಈ ಅಂಶಗಳ ಕುರಿತಂತೆ ವಿಶದ ಆದೇಶ ನೀಡುವುದಾಗಿ ಪ್ರಕಟಿಸಿದ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.