ADVERTISEMENT

ಕೋವಿಡ್‌ ಪರಿಣಾಮ | ವಕೀಲರಿಗೆ ತುರ್ತು ₹ 50 ಸಾವಿರ ಬಿಡುಗಡೆಗೆ ಕೋರಿ ಪಿಐಎಲ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 4:12 IST
Last Updated 18 ಏಪ್ರಿಲ್ 2020, 4:12 IST
   

ಬೆಂಗಳೂರು: 'ಕೊವಿಡ್-19ರ ಪರಿಣಾಮ ಕೋರ್ಟ್ ಕಲಾಪಗಳು ಬಹುತೇಕ ಸ್ಥಗಿತಗೊಂಡಿದ್ದು ರಾಜ್ಯದಾದ್ಯಂತ ಸಾಕಷ್ಟು ವಕೀಲರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಕಾರಣ ಹಣದ ಅಗತ್ಯವಿರುವ ವಕೀಲರಿಗೆ ಕೂಡಲೇ ₹ 50 ಸಾವಿರ ಎಕ್ಸ್ ಗ್ರೇಷಿಯಾ ಮೊತ್ತ ಬಿಡುಗಡೆ ಮಾಡಲು ವಕೀಲರ ಪರಿಷತ್ ಗೆ ನಿರ್ದೇಶಿಸಬೇಕು'ಎಂದು ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಹಿರಿಯ ವಕೀಲ ಎಚ್.ಸಿ‌. ಶಿವರಾಮು ಸಲ್ಲಿಸಿರುವ ಈ ಪಿಐಎಲ್ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

'ರಾಜ್ಯ ವಕೀಲರ ಪರಿಷತ್ ನಿಂದ ಸನ್ನದು ಪಡೆದಿರುವ ವಕೀಲರು ಕಾಲಕಾಲಕ್ಕೆ ಕಲ್ಯಾಣ ನಿಧಿಗೆ ಹಣ ಪಾವತಿ ಮಾಡುತ್ತಿದ್ದಾರೆ‌. ಇದರ ಕೋಟ್ಯಂತರ ಮೊತ್ತವನ್ನು ವಿವಿಧ ಬ್ಯಾಂಕುಗಳಲ್ಲಿ ಕಾಯಂ ಠೇವಣಿ ಇರಿಸಲಾಗಿದೆ. ಈ ಮೊತ್ತದಲ್ಲಿ ₹ 50 ಸಾವಿರವನ್ನು ಯಾರಿಗೆ ಅಗತ್ಯವಿದೆಯೊ ಅಂತಹ ವಕೀಲರಿಗೆ ಎಕ್ಸ್ ಗ್ರೇಷಿಯಾ ಮೊತ್ತ ಎಂದು ಪರಿಗಣಿಸಿ ತಕ್ಷಣವೇ ಬಿಡುಗಡೆ ಮಾಡಲು ರಾಜ್ಯ ವಕೀಲರ ಪರಿಷತ್ ಗೆ ನಿರ್ದೇಶಿಸಬೇಕು'ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ADVERTISEMENT

'ಈಗ ನೀಡಬಹುದಾದ ₹ 50 ಸಾವಿರ ಮೊತ್ತವನ್ನು ಕಲ್ಯಾಣ ನಿಧಿಯ ಬಿಡುಗಡೆ ಸಮಯದಲ್ಲಿ ಕಡಿತ ಮಾಡಿಕೊಳ್ಳಬಹುದು. ಆದ್ದರಿಂದ, ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1961 ಕಲಂ 168ರ ಅಡಿಯಲ್ಲಿ ಈ ಹಣ ಬಿಡುಗಡೆ ಮಾಡಲು ನಿರ್ದೇಶಿಸಬೇಕು'ಎಂದು ಕೋರಲಾಗಿದೆ.

'ಈ ನಿಟ್ಟಿನಲ್ಲಿ ಈಗಾಗಲೇ ಪಶ್ಚಿಮ ಬಂಗಾಳ, ದೆಹಲಿ ಹಾಗೂ ತಮಿಳುನಾಡು ರಾಜ್ಯಗಳ ವಕೀಲರ ಪರಿಷತ್ ಕೈಗೊಂಡಿರುವ ಕ್ರಮಗಳನ್ನು ಗಮನಿಸಬಹುದಾಗಿದೆ' ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ, ಭಾರತೀಯ ವಕೀಲರ ಪರಿಷತ್ ಮತ್ತು ರಾಜ್ಯ ವಕೀಲರ ಪರಿಷತ್ ಕಾರ್ಯದರ್ಶಿಗಳು, ಭಾರತೀಯ ವಕೀಲರ ಕಲ್ಯಾಣ ನಿಧಿಗಳ ಸಮಿತಿ ಹಾಗೂ ಕರ್ನಾಟಕ ವಕೀಲರ ಕಲ್ಯಾಣ ನಿಧಿ ಟ್ರಸ್ಟಿ ಸಮಿತಿಯ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ‌ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.