ಅತ್ಯಾಚಾರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಚ್ಛೇದನ ಹೊಂದಿ ನಿವೃತ್ತಿಯ ಅಂಚಿನಲ್ಲಿರುವ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ 59 ವರ್ಷದ ಅಧಿಕಾರಿಯಾಗಿರುವ ಅರ್ಜಿದಾರರ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
"ನಿವೃತ್ತಿಗೆ ಇನ್ನೊಂದು ವರ್ಷ ಇರುವಾಗ ಇದೆಲ್ಲಾ ಬೇಕಿತ್ತಾ? ಈಗ ನೋಡಿ ನಿವೃತ್ತಿಯ ಲಾಭಕ್ಕೆ ಸಂಕಟ ಎದುರಾಗಿದೆ" ಎಂದು ಅರ್ಜಿದಾರರ ನಡೆಗೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, "ಇಬ್ಬರ ನಡುವಿನ ಲೈಂಗಿಕ ಸಂಬಂಧ ಒಪ್ಪಿತವಾಗಿರುವ ಕಾರಣ ಅರ್ಜಿದಾರರ ವಿರುದ್ಧ, ಭಾರತೀಯ ದಂಡ ಸಂಹಿತೆ-1860ರ ಕಲಂ 376 ಮತ್ತು 506ರ ಅಡಿಯಲ್ಲಿನ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದೆ.
ಅರ್ಜಿದಾರರು ಮತ್ತು ದೂರುದಾರ ಮಹಿಳೆ ಶಾದಿ ಡಾಟ್ ಕಾಮ್ ನಲ್ಲಿ ಪರಿಚಿತರಾಗಿದ್ದರು. ಈ ಸ್ನೇಹ ಗಾಢವಾಗಿ ಲೈಂಗಿಕ ಸಂಬಂಧಕ್ಕೂ ವಿಸ್ತರಿಸಿತ್ತು. "ನಾನು ಗರ್ಭ ಧರಿಸಿದ ಬಳಿಕ ಅರ್ಜಿದಾರ ಮುಂಬೈಗೆ ಪರಾರಿಯಾಗಿದ್ದಾರೆ" ಎಂದು ಮಹಿಳೆ ದೂರು ನೀಡಿದ್ದಾರೆ. ಅರ್ಜಿದಾರರು ಮತ್ತು ದೂರುದಾರ ಮಹಿಳೆ ಇಬ್ಬರೂ ವಿಚ್ಛೇದಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.