ADVERTISEMENT

ನೋವುನಿವಾರಕ ಮಾತ್ರೆಯಿಂದ ಸಾವು!

ವೈಯಾಲಿಕಾವಲ್‌ನ ಕೋದಂಡರಾಮಪುರದಲ್ಲಿ ಇಬ್ಬರು ಯುವಕರ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:47 IST
Last Updated 21 ನವೆಂಬರ್ 2019, 2:47 IST

ಬೆಂಗಳೂರು: ವೈಯಾಲಿಕಾವಲ್‌ನ ಕೋದಂಡರಾಮಪುರದಲ್ಲಿ ಯುವಕ ರಿಬ್ಬರ ಸಾವಿಗೆ ಮಾದಕ ವಸ್ತು ಅಂಶ ವಿರುವ ಮಾತ್ರೆ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಸ್ಥಳೀಯ ನಿವಾಸಿಗಳಾದ ಅಭಿಲಾಷ್ (23) ಮತ್ತು ಗೋಪಿ (30) ಮೃತಪಟ್ಟವರು. ಸುಮನ್ ಎಂಬುವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದರು.

ಅಭಿಲಾಷ್, ಗೋಪಿ ಮತ್ತು ಸುಮನ್ ಸ್ನೇಹಿತರು. ಕೋದಂಡರಾಮ ಪುರದ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ಶನಿವಾರ (ನ.16) ನಡೆದಿತ್ತು. ಇದೇ ಸಂದರ್ಭದಲ್ಲಿ ಮೂವರ ಪೈಕಿ ಒಬ್ಬನ ಹುಟ್ಟುಹಬ್ಬವಿತ್ತು.

ADVERTISEMENT

ಹುಟ್ಟುಹಬ್ಬ ಆಚರಿಸಲು ಭಾನು ವಾರ (ನ.17ರಂದು) ಮಲ್ಲೇಶ್ವರದ ಫ್ಲವರ್‌ ಮಾರ್ಕೆಟ್‌ನ ಬಿಬಿಎಂಪಿ ಮೈದಾನದ ಬಳಿ ಮೂವರು ಸೇರಿ, ರಾತ್ರಿವರೆಗೂ ಪಾರ್ಟಿ ಮಾಡಿದ್ದರು. ಬಳಿಕ ಎಲ್ಲರೂ ಮನೆಗೆ ಮರಳಿದ್ದರು.

ನ.18ರಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಮೂವರಿಗೂ ಹೊಟ್ಟೆನೋವು, ವಾಂತಿಭೇದಿ ಕಾಣಿಸಿಕೊಂಡಿದೆ.

ಪೋಷಕರು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ (ನ.19ರಂದು) ಬೆಳಿಗ್ಗೆ ಅಭಿಲಾಷ್ ಮತ್ತು ಗೋಪಿ ಸಾವಿಗೀಡಾ ಗಿದ್ದಾರೆ. ಈ ಬಗ್ಗೆ ವೈಯಾಲಿಕಾವಲ್ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ನೀಡುವ ನೋವು ನಿವಾರಕ ಮಾತ್ರೆಯನ್ನು ಯುವಕರು ಸೇವಿಸಿದ್ದಾರೆ. ಮಾತ್ರೆ ಪುಡಿ ಮಾಡಿ ಡಿಸ್ಟಿಲ್ಡ್‌ ವಾಟರ್‌ನಲ್ಲಿ ಬೆರೆಸಿ ಸಿರಿಂಜ್ ಮೂಲಕ ದೇಹಕ್ಕೆ ಚುಚ್ಚಿಕೊಂಡಿದ್ದಾರೆ. ಹೀಗಾಗಿ, ರಕ್ತನಾಳದ ಮೂಲಕ ದೇಹಕ್ಕೆ ಓವರ್‌ ಡೋಸ್‌ ಪೂರೈಕೆಯಾಗಿರುವ ಪರಿಣಾಮ ಸಾವು ಸಂಭವಿಸಿದೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸುಮನ್ ಚೇತರಿಸಿಕೊಂಡ ನಂತರ ಕೃತ್ಯದ ಬಗ್ಗೆ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.

ಔಷಧದಂಗಡಿ ವಿರುದ್ಧ ಕ್ರಮ

‘ಮಾದಕ ವಸ್ತುವಿನ ಅಂಶ ಇರುವ ಮಾತ್ರೆಯನ್ನು ಯುವಕರು ತೆಗೆದುಕೊಂಡಿದ್ದಾರೆ. ಅದನ್ನು ಸೇವಿಸಿದರೆ ಮತ್ತೇರುತ್ತದೆ. ಡ್ರಗ್ಸ್ ಬದಲಿಗೆ, ಆ ಮಾತ್ರೆ ಸೇವಿಸಿರುವ ಸಾಧ್ಯತೆಯಿದೆ. ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಯನ್ನು ಔಷಧದಂಗಡಿಯವರು ಗ್ರಾಹಕರಿಗೆ ನೀಡುವಂತಿಲ್ಲ. ವೈದ್ಯರ ಸಲಹೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಿರುವ ಔಷಧದಂಗಡಿ ಮಾಲೀಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದರು.

ಮಾದಕ ವಸ್ತು ಸೇವಿಸಿ ಇಬ್ಬರು ಯುವಕರು ಸಾವಿಗೀಡಾದ ಹಿನ್ನೆಲೆಯಲ್ಲಿ ನಗರದಲ್ಲಿ ಮಾದಕ ವಸ್ತು ಮಾಫಿಯಾ ನಿಯಂತ್ರಣಕ್ಕೆ ಒಗ್ಗೂಡಿ ಕಾರ್ಯಾಚರಣೆ ನಡೆಸಲು ಸಿಸಿಬಿ, ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ), ಕೇಂದ್ರ ಆರ್ಥಿಕ ಗುಪ್ತಚರ, ಕಸ್ಟಮ್ಸ್, ರೈಲ್ವೆ ಇಲಾಖೆಯ ಆರ್‌ಪಿಎಫ್, ಔಷಧ ನಿಯಂತ್ರಣ ಇಲಾಖೆ ಮತ್ತು ವಿದೇಶಿ ಪ್ರಜೆಗಳ ನೋಂದಣಿ ವಿಭಾಗ ಮುಂದಾಗಿವೆ.

ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಸಮನ್ವಯದಿಂದ ಕೆಲಸ ಮಾಡಲು ಈ ತನಿಖಾ ಸಂಸ್ಥೆಗಳು ನಿರ್ಣಯ ಕೈಗೊಂಡಿವೆ.

‘ಮಾದಕ ವಸ್ತು ಜಾಲದ ವೃತ್ತಿಪರ ಮಾರಾಟಗಾರರು (ಪೆಡ್ಲರ್) ಹೆಸರಿನ ಪಟ್ಟಿ ತಯಾರಿಸಿ, ಅವರ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು.‌ ಮಾರಾಟಗಾರರ ಜೊತೆಗೆ ಪೂರೈಕೆದಾರರ ಪತ್ತೆಗೆ ಆದ್ಯತೆ ನೀಡಬೇಕು’ ಎಂದು ಕಮಿನಷರ್‌ ಹೇಳಿದ್ದಾರೆ. ಈ ಮಾತಿಗೆ ಸಭೆಯಲ್ಲಿದ್ದ ಇತರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ವೈದ್ಯರ ಸಲಹೆ ಇಲ್ಲದೆ ಕೆಲವು ಮಾತ್ರೆಗಳ ಮಾರಾಟಕ್ಕೆ ನಿಷೇಧವಿದೆ. ಆದರೂ ಕೆಲವು ಔಷಧದಂಗಡಿಗಳು ಹಾಗೂ ಮತ್ತೇರಿಸುವ ಮಾತ್ರೆ, ಔಷಧಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿವೆ. ಇದರಿಂದ ಮಾದಕ ವಸ್ತು ವ್ಯಸನಿಗಳಿಗೆ ಅನುಕೂಲವಾಗಿದ್ದು, ಪ್ರಾಣ ಹಾನಿಗೂ ಕಾರಣವಾಗುತ್ತಿದೆ. ಈ ಬಗ್ಗೆ ಔಷಧ ನಿಯಂತ್ರಣ
ಮಂಡಳಿ ಅಧಿಕಾರಿಗಳು, ವ್ಯಾಪಾರಿಗಳಿಗೆ ಎಚ್ಚರಿಕೆ ಕೊಡಬೇಕು ಎಂದು ಕಮಿಷನರ್‌ ಸೂಚಿಸಿದರು ಎನ್ನಲಾಗಿದೆ.

‘ಮಾದಕ ವಸ್ತು ಜಾಲದ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಾದಕ ವಸ್ತು ಕುರಿತು ತನಿಖೆ ನಡೆಸುವ ಬಗ್ಗೆ ಎಲ್ಲ ಸಂಸ್ಥೆಗಳ ಅಧಿಕಾರಿಗಳು ಸಮಾಲೋಚನೆ ನಡೆದಿದೆ. ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಯಿತು’ ಎಂದು ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್.ಆರ್. ಜೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.