ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಅವರನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಚಾರಣೆ ನಡೆಸಿದರು.
ಹೇಮಂತ್ ನಿಂಬಾಳ್ಕರ್ ಸಿಐಡಿ ವಿಭಾಗದ ಐಜಿಪಿ ಆಗಿದ್ದಾಗ ಐಎಂಎ ವಂಚನೆ ಪ್ರಕರಣ ಕುರಿತು ವಿಚಾರಣೆ ನಡೆಸಿ ವರದಿ ನೀಡಿದ್ದರು. ಈ ವರದಿಯಲ್ಲಿ ಮನ್ಸೂರ್ ಖಾನ್ ಅವರ ಒಡೆತನದ ಐಎಂಎಗೆ ಕ್ಲೀನ್ ಚಿಟ್ ನೀಡಿದ್ದರು.
ಅಜಯ್ ಹಿಲೋರಿ ಅವರು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿದ್ದಾಗ ವಂಚಕ ಕಂಪನಿ ವಿರುದ್ಧ ವಿಚಾರಣೆ ನಡೆಸಿದ್ದರು. ಈ ಕಂಪನಿ ರಿಜಿಸ್ಟ್ರಾರ್ ಕಂಪನೀಸ್ ಕಾಯ್ದೆ ಅಡಿ ನೋಂದಣಿ ಆಗಿದ್ದು ಕಾನೂನು ಪ್ರಕಾರವೇ ವಹಿವಾಟು ನಡೆಸುತ್ತಿದೆ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್‌ಗೆ ವರದಿ ನೀಡಿದ್ದರು.
ಈ ಸಂಬಂಧ ಇಬ್ಬರೂ ಅಧಿಕಾರಿಗಳನ್ನು ಸಿಬಿಐ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಯಿತು. ಕ್ಲೀನ್ ಚಿಟ್ ನೀಡಿರುವ ಕುರಿತು ಸುದೀರ್ಘವಾಗಿ ಪ್ರಶ್ನಿಸಲಾಯಿತು ಎಂದು ಕೇಂದ್ರ ತನಿಖಾ ದಳದ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಈಗಾಗಲೇ ಐಎಎಸ್ ಅಧಿಕಾರಿಗಳಾದ ರಾಜಕುಮಾರ್ ಖತ್ರಿ, ಬಿ.ಎಂ. ವಿಜಯ ಶಂಕರ್, ಬೆಂಗಳೂರು ಉತ್ತರ ವಲಯದ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ಅವರನ್ನು ವಿಚಾರಣೆ ನಡೆಸಲಾಗಿದೆ.
ಮನ್ಸೂರ್ ಖಾನ್ ಸದ್ಯ ಸಿಬಿಐ ವಶದಲ್ಲಿದ್ದು, ತನ್ನಿಂದ ‘ಅಕ್ರಮ ಲಾಭ’ ಪಡೆದಿರುವವರ ಹೆಸರನ್ನು ಬಾಯಿ ಬಿಡುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಬೇರೆಯವರ ವಿಚಾರಣೆ ನಡೆಸಲಾಗುತ್ತಿದೆಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.