
ನಗರದಲ್ಲಿ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಉಪನ್ಯಾಸ ನೀಡಿದರು.
ಬೆಂಗಳೂರು: ‘ಭಾರತವು ಹಿಂದೂ ರಾಷ್ಟ್ರವಾಗಿದ್ದು, ಈ ರಾಷ್ಟ್ರದ ಹೊಣೆ ಹಿಂದೂಗಳ ಮೇಲಿದೆ’ ಎಂದು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕುರಿತು ಉಪನ್ಯಾಸದಲ್ಲಿ ಅವರು, ಸಂಘ ನಡೆದು ಬಂದ ಹಾದಿ ಮತ್ತು ಉದ್ದೇಶದ ಕುರಿತು ವಿವರಿಸಿದರು.
‘ಸಾಮರಸ್ಯ ಬಯಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡುತ್ತದೆ. ಬ್ರಿಟಿಷರು ಭಾರತಕ್ಕೆ ರಾಷ್ಟ್ರೀಯತೆ ನೀಡಿಲ್ಲ. ಪ್ರಾಚೀನ ಕಾಲದಿಂದಲೇ ಭಾರತವು ತನ್ನದೇ ರಾಷ್ಟ್ರೀಯತೆಯನ್ನು ಹೊಂದಿದೆ’ ಎಂದರು.
‘ದೇಶದ ಎಲ್ಲ ಮುಸ್ಲಿಂ, ಕ್ರೈಸ್ತರ ಪೂರ್ವಜರೂ ಹಿಂದೂಗಳೇ. ಇಂದಿಗೂ ಕೆಲವು ಕ್ರೈಸ್ತರು, ಮುಸ್ಲಿಮರೂ ತಮ್ಮ ಗೋತ್ರವನ್ನು ಹೇಳುತ್ತಾರೆ. ಆದರೆ, ಅವರು ಅದನ್ನು ಮರೆತಿದ್ದಾರೆ ಅಷ್ಟೆ. ಹಾಗಾಗಿ ಇಡೀ ಭಾರತದಲ್ಲಿ ‘ಅಹಿಂದೂ’ ಎನ್ನುವವರು ಯಾರೂ ಇಲ್ಲ. ಇದು ಹಿಂದೂ ರಾಷ್ಟ್ರ ಎನ್ನುವುದರಲ್ಲೂ ಅನುಮಾನವಿಲ್ಲ. ಇದನ್ನು ಎಲ್ಲರಿಗೂ ನೆನಪಿಸುವುದು ಸಂಘಟನೆಯ ಕೆಲಸ’ ಎಂದು ಹೇಳಿದರು.
ಕೇಶವ ಬಲಿರಾಮ ಹೆಡಗೇವಾರ್ ಅವರು 1925ರ ಸೆಪ್ಟೆಂಬರ್ 27 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದ್ದರು. ಹಿಂದೂ ಸಂಸ್ಕೃತಿ, ಹಿಂದೂ ಒಗ್ಗಟ್ಟು ಮತ್ತು ರಾಷ್ಟ್ರ ಸ್ವಾವಲಂಬನೆ ಸಾಧಿಸುವುದು ಸಂಘದ ಆಶಯವಾಗಿದ್ದು, ಸದಸ್ಯರಿಗೆ ವಿವಿಧ ರೀತಿಯ ತರಬೇತಿ, ಸೈದ್ಧಾಂತಿಕ ಶಿಕ್ಷಣ ನೀಡಲಾಗುತ್ತದೆ ಎಂದು ವಿವರಿಸಿದರು.
ಸಂಘವು ಸ್ವಯಂ ಬೆಂಬಲಿತ ಸಂಸ್ಥೆಯಾಗಿದ್ದು, ಸಂಘ ನಡೆಸಲು ಹೊರಗಿನಿಂದ ಹಣಕಾಸಿನ ನೆರವು ಪಡೆದಿಲ್ಲ. ಸ್ವಯಂ ಸೇವಕರಿಂದ ವರ್ಷಕ್ಕೆ ಒಂದು ಬಾರಿ ಗುರುದಕ್ಷಿಣೆ ಪಡೆಯುವ ಮೂಲಕ ಸಂಘಟನೆಯ ವೆಚ್ಚಗಳನ್ನು ಭರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಪಿ. ವಾಮನ ರಾವ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ರಾಮಲಾಲ್, ಸಹಸಂಪರ್ಕ ಪ್ರಮುಖರಾದ ರಮೇಶ್ ಪಪ್ಪಾ, ಭರತ್ ಭೂಷಣ್, ಸುನಿಲ್ ದೇಶಪಾಂಡೆ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹಪ್ರಚಾರ ಪ್ರಮುಖರಾದ ಪ್ರದೀಪ್ ಜೋಷಿ, ನರೇಂದ್ರ ಕುಮಾರ್, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಹಾಜರಿದ್ದರು.
‘ಇಡೀ ಸಮಾಜದ ಹೃದಯ ಸಂಘದ ಪರ’
ಅನೇಕರು ಸಂಘವನ್ನು ನಿಂದಿಸುತ್ತಾರಾದರೂ ಅವರಿಗೂ ಸಂಘಟನೆಯ ಕಾರ್ಯದ ನಿಜವಾದ ಅರಿವಿದೆ. ಆದ್ದರಿಂದ ಅವರ ನಿಂದನೆಯು ಕೇವಲ ಬಾಯಿಮಾತಿಗೆ ಸೀಮಿತವಾಗಿದೆ. ಹಾಗಾಗಿ ಇಡೀ ಸಮಾಜದ ಹೃದಯ ಸಂಘದ ಪರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಸಮಾಜವನ್ನು ಸಂಘಟಿಸುತ್ತಿದೆ’ ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.