ಬೆಂಗಳೂರು: ‘ಹಿಂದೂ ಸಮಾಜ ಜಾಗೃತಗೊಳ್ಳುತ್ತಿದ್ದು, ಇದರ ಮೊದಲ ಹೆಜ್ಜೆಯಾಗಿ ರಾಮ ಮಂದಿರ ನಿರ್ಮಿಸಲಾಗಿದೆ’ ಎಂದು ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದರು.
ಧಾತ್ರಿ ಪಬ್ಲಿಕೇಷನ್ಸ್ ಇಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಸ್. ಉಮೇಶ್ ಅವರು ರಚಿಸಿದ ‘ಅಯೋಧ್ಯಾ’ ಕೃತಿಯ ಮೊದಲ ಪ್ರತಿ ಸ್ವೀಕರಿಸಿ, ಮಾತನಾಡಿದರು.
‘500 ವರ್ಷಗಳ ಸಂಘರ್ಷದ ಬಳಿಕ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ನಿರಂತರ ಸಂಘರ್ಷದ ಬಳಿಕ ಜಯ ದೊರೆತಿದೆ. ರಾಮ ಎಂಬ ಪದವು ಈ ಸಂಸ್ಕೃತಿಯ ಜೊತೆಗೆ ಬೆರೆತಿದೆ. ಇದರಿಂದಾಗಿ ಇಡೀ ದೇಶದಲ್ಲಿ ರಾಮನ ನಾಮ ಸ್ಮರಣೆ ನಡೆಯುತ್ತಿದೆ. ರಾಮ ನಾಮವು ಬೀಜ ಮಂತ್ರವೂ ಹೌದು, ರಣ ಮಂತ್ರವೂ ಹೌದು’ ಎಂದು ಹೇಳಿದರು.
ಲೇಖಕ ಎಸ್.ಎಸ್. ಉಮೇಶ್, ‘ಕಳೆದ ಎರಡು ವರ್ಷ ಅಯೋಧ್ಯೆಯ ಬಗ್ಗೆ ಸಂಶೋಧನೆ ನಡೆಸಿ, ಪುಸ್ತಕವನ್ನು ರಚಿಸಿದ್ದೇನೆ. ಈ ಅವಧಿಯಲ್ಲಿ ಅಯೋಧ್ಯೆಗೂ ಭೇಟಿ ನೀಡಿ, ಸಾಧು–ಸಂತರನ್ನು ಸಂದರ್ಶಿಸಿದ್ದೇನೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿ ಹಲವರು ಪೂರಕ ಮಾಹಿತಿಗಳನ್ನು ಒದಗಿಸಿದ್ದಾರೆ’ ಎಂದು ಹೇಳಿದರು.
ಪತ್ರಕರ್ತ ರವೀಂದ್ರ ಜೋಶಿ, ಪ್ರಕಾಶಕಿ ಬೃಂದಾ ಉಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.