ADVERTISEMENT

ಶೂದ್ರರಾದರೆ ಎಸ್‌ಸಿ ಮೀಸಲಾತಿ ಕೇಳಿ: ಮುಖ್ಯಮಂತ್ರಿ ಚಂದ್ರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:27 IST
Last Updated 24 ಮಾರ್ಚ್ 2021, 20:27 IST

ಬೆಂಗಳೂರು: ‘ಲಿಂಗಾಯತ ಸಮುದಾಯದವರೂ ಶೂದ್ರರು ಎಂದುಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಕೇಳಿ. ಅದು ಬಿಟ್ಟು ನಮ್ಮ ತಟ್ಟೆಯಲ್ಲಿ (2ಎ ಪ್ರವರ್ಗ) ಕೈ ಹಾಕಿ ಅನ್ನವನ್ನು ಕಿತ್ತುಕೊಳ್ಳುವುದು ಬೇಡ’ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಗೌರವ ಅಧ್ಯಕ್ಷ ’ಮುಖ್ಯಮಂತ್ರಿ‘ ಚಂದ್ರು ಹೇಳಿದರು.

ಮುಂದುವರಿದ ಸಮುದಾಯಗಳನ್ನು 2ಎ ಪ್ರವರ್ಗ ಪಟ್ಟಿಯಲ್ಲಿ ಸೇರಿಸಬಾರದು ಎಂದು ಆಯೋಗಕ್ಕೆ ನೀಡಿದ್ದ ಮನವಿಯ ನಿಮಿತ್ತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಹಿರಂಗ ವಿಚಾರಣೆಯಲ್ಲಿ ಅವರು ತಮ್ಮ ವಾದವನ್ನು ಮಂಡಿಸಿದರು.

‘ಪಟ್ಟಿಯಲ್ಲಿ ಈಗಾಗಲೇ ಇರುವ ಹಲವಾರು ಸಮುದಾಯಗಳ ವ್ಯಕ್ತಿಗಳು ಇದುವರೆಗೂ ಒಂದು ಬಾರಿಯೂ ಮೀಸಲಾತಿಯ ಉಪಯೋಗ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಮುಂದುವರಿದ ಪ್ರಬಲ ಜಾತಿಗಳನ್ನು ಸೇರಿಸಿದಲ್ಲಿ ಕುಲಕಸುಬು ಆಧಾರಿತ ಸಮುದಾಯಗಳು ತಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್‌, ‘ರಾಜಕೀಯ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾದಂತಹ ವರದಿಯನ್ನು ಸರ್ಕಾರಕ್ಕೆ ನೀಡಬೇಕು ಹಾಗೂ ಅತಿ ಹಿಂದುಳಿದ ಜಾತಿಗಳ ಆಸ್ಮಿತೆ ಹಾಗೂ ಅಸ್ತಿತ್ವವನ್ನು ಕಾಪಾಡಬೇಕು’ ಎಂದು ಅವರು ಆಯೋಗಕ್ಕೆ ಮನವಿ ಮಾಡಿದರು.

ವೇದಿಕೆಯ ಉಪಾಧ್ಯಕ್ಷರಾದ ಡಾ.ಜಿ. ರಮೇಶ್‌, ಎಚ್‌.ಸುಬ್ಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಡಿ ಗೋಪಾಲ್‌, ಎಚ್.ಸಿ. ರುದ್ರಪ್ಪ, ಟಿ.ಸಿ ನಟರಾಜ್‌, ಎಂ.ಬಿ ಬಸವರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.