
ಬೆಂಗಳೂರು: ವಸಾಹತುಶಾಹಿ ಭಾರತದ ಇತಿಹಾಸವನ್ನು ಸಾರುವ ಕಲೆಗಳ ಪ್ರದರ್ಶನ ‘ಹಿಂದೂಸ್ತಾನ್ ಫೈಲ್ಸ್–1757–1950’ ಅನ್ನು ಪಶ್ಚಿಮ ಬಂಗಾಳದ ವಿರಾಸತ್ ಆರ್ಟ್ ಪಬ್ಲಿಕೇಶನ್ ನ.14ರಿಂದ 23ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದೆ.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಹಿಂದೂಸ್ತಾನ್ ಫೈಲ್ಸ್’ ಸಂಯೋಜಕ ಬಸು ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದರು.
1757 ಭಾರತದಲ್ಲಿ ಬ್ರಿಟಿಷರ ಆಡಳಿತ ಆರಂಭವಾದ ವರ್ಷ. ಅಲ್ಲಿಂದ 1950ರವರೆಗಿನ ಚಿತ್ರಣವನ್ನು ಕಟ್ಟಿಕೊಡುವ ಅಪರೂಪದ ಚಿತ್ರ, ಛಾಯಾಚಿತ್ರ, ಪತ್ರ, ಆಡಳಿತದ ದಾಖಲೆಗಳು, ಐತಿಹಾಸಿಕ ವಸ್ತುಗಳ ಸಂಗ್ರಹವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. 250ಕ್ಕೂ ಅಧಿಕ ಕಲಾಕೃತಿಗಳು ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.
ಕೋಟ್ಯಂತರ ರೂಪಾಯಿ ಬೆಲೆಬಾಳುವ ಈ ಕಲಾಕೃತಿಗಳು ಮಾರಾಟಕ್ಕೆ ಇರುವುದಿಲ್ಲ. ಪ್ರದರ್ಶನವಷ್ಟೇ ಇದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಭಾರತದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯ ಹೆಜ್ಜೆ ಗುರುತುಗಳನ್ನು ಪ್ರತಿಬಿಂಬಿಸುವ ಈ ಪ್ರದರ್ಶನವನ್ನು ಇತಿಹಾಸಕಾರರು, ವಿದ್ಯಾರ್ಥಿಗಳು, ಸಂಶೋಧಕರು ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ವಿಲಿಯಂ ಬೈಲ್, ಚಾರ್ಲ್ಸ್ ಡಿ. ಒಯ್ಲಿ, ವಿಲಿಯಂ ಡ್ಯಾನಿಯಲ್, ಹೆನ್ರಿ ಸಾಲ್ಟ್, ಎಫ್.ಬಿ. ಸೋಲ್ಲಿನ್ಸ್ ಮುಂತಾದ ಕಲಾವಿದ ಕಲಾಕೃತಿಗಳು, ರಾಜಾರಾಂ ಮೋಹನ್‌ರಾಯ್, ರವೀಂದ್ರನಾಥ ಟಾಗೋರ್, ವಾರನ್ ಹೇಸ್ಟಿಂಗ್ಸ್, ಟಿಪ್ಪು ಸುಲ್ತಾನ್, ಲಾರ್ಡ್ ಕಾರ್ನ್‌ವಾಲೀಸ್, ಜಮಿನಿ ರಾಯ್ ಮೊದಲಾದವರ ಅಂಚೆ ಪತ್ರ ವ್ಯವಹಾರಗಳ ಪತ್ರಗಳು, ಕೊಹಿನೂರು ವಜ್ರದ ವರ್ಗಾವಣೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು, ಸಂವಿಧಾನದ ಮೊದಲ ಪ್ರತಿಗಳು ಪ್ರದರ್ಶನದಲ್ಲಿವೆ ಎಂದರು.
ನ.7ರಂದು ಬೆಳಿಗ್ಗೆ 9.30ಕ್ಕೆ ವಿಚಾರ ಸಂಕಿರಣ ನಡೆಯಲಿದೆ. ಕಲಾವಿದರಾದ ಮೀರಾ ಚಕ್ರವರ್ತಿ, ಮನೋಹರ್ ಯಡವಟ್ಟಿ, ನಾನಕ್ ಗಂಗೋಪಾಧ್ಯಾಯ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿರಾಸತ್ ಆರ್ಟ್ ಪಬ್ಲಿಕೇಶನ್ ಮಾಲೀಕ ಗಣೇಶ್ ಪ್ರತಾಪ್ ಸಿಂಗ್, ಪರಿಷತ್ತಿನ ಉಪಾಧ್ಯಕ್ಷ ಅಪ್ಪಾಜಯ್ಯ ಕೆ.ಎಸ್., ವಿರಾಸತ್ ಆರ್ಟ್ಸ್ ಮುಖ್ಯ ಸಂಯೋಜಕ ಪ್ರಥಾ ಪ್ರತೀಕ್ ರಾಯ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.