ADVERTISEMENT

ಎಂಜಿನಿಯರ್‌ಗಳ ನೇಮಕ: ಸರ್ಕಾರದ ತೀರ್ಮಾನ ರದ್ದುಪಡಿಸಿದ ಕೆಎಟಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 22:42 IST
Last Updated 6 ಏಪ್ರಿಲ್ 2020, 22:42 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 900 ಎಂಜಿನಿಯರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಲೋಕೋಪಯೋಗಿ ಇಲಾಖೆಯ ತೀರ್ಮಾನವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿದೆ.

ಲೋಕೋಪಯೋಗಿ ಇಲಾಖೆ ಯಲ್ಲಿ 870 ಎಂಜಿನಿಯರ್‌ಗಳ ನೇಮಕಾತಿಗಾಗಿಮೈತ್ರಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಪ್ರಕ್ರಿಯೆಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ 2019ರ ಅಕ್ಟೋಬರ್ 31ರಂದು ರದ್ದುಪಡಿಸಿತ್ತು. ಈ ಹುದ್ದೆಗಳೂ ಸೇರಿದಂತೆ ಒಟ್ಟು 900 ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ಮೂಲಕ ನಡೆಸಲು ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಮೂವರು ಅಭ್ಯರ್ಥಿಗಳ ಕೆಎಟಿ ಮೊರೆ ಹೋಗಿದ್ದರು.

‌ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಂಡರೆ ವಿಳಂಬವಾಗುತ್ತದೆ ಎಂಬ ನೆಪವೊಡ್ಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕ ಮಾಡಿಕೊಳ್ಳಲು ಈ ಹಿಂದಿನ ಸಮ್ಮಿಶ್ರ ಸರ್ಕಾರ ನಿರ್ಧರಿಸಿತ್ತು.

ADVERTISEMENT

ಈ ಸಲುವಾಗಿ ‘ಲೋಕೋಪಯೋಗಿ ಇಲಾಖೆಯ ಸೇವಾ ನಿಯಮಗಳು–2019 (ವಿಶೇಷ ನೇಮಕಾತಿ)’ ಸಿದ್ಧಪಡಿಸಿ, 570 ಸಹಾಯಕ ಎಂಜಿನಿಯರ್‌ಗಳು ಹಾಗೂ 300 ಕಿರಿಯ ಎಂಜಿನಿಯರ್‌ ಹುದ್ದೆಗಳ ಭರ್ತಿಗೆ ಈ ವರ್ಷದ ಮಾರ್ಚ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕಾಗಿ ಇಲಾಖೆಯಲ್ಲಿ ವಿಶೇಷ ಆಯ್ಕೆ ಸಮಿತಿ ರಚಿಸಲಾಗಿತ್ತು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿತ್ತು. ಬಿಜೆಪಿ ಸರ್ಕಾರವು ಫಲಿತಾಂಶ ಪ್ರಕಟಣೆಯನ್ನು ತಡೆಹಿಡಿದಿತ್ತು. ಫಲಿತಾಂಶದ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಬಳಿಕ, ಇಡೀ ನೇಮಕ ಪ್ರಕ್ರಿಯೆಯನ್ನೇ ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ಕೆಎಟಿಯಲ್ಲಿ ಪ್ರಶ್ನೆ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚಿಸಿತ್ತು. ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು. ಈ ನಡುವೆ, ಕೆಪಿಎಸ್‌ಸಿ ಮೂಲಕ ನೇಮಕ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿತ್ತು.

350 ಮಂದಿ ಆಕ್ಷೇಪಣೆ ಸಲ್ಲಿಸಿದ್ದರು. ತಡೆಯಾಜ್ಞೆ ಇದ್ದಾಗಲೂ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿದೆ ಎಂದು ಅಭ್ಯರ್ಥಿಗಳು ಕೆಎಟಿ ಗಮನಕ್ಕೆ ತಂದಿದ್ದರು. ಇದನ್ನು ಸಹ ಕೆಎಟಿ ರದ್ದುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.