ADVERTISEMENT

ಪತ್ರಿಕೋದ್ಯಮ ಶಿಕ್ಷಣ: ಕಗ್ಗಂಟಿನ ವಾತಾವರಣ -ಎಚ್‌.ಎನ್‌. ಸುರೇಶ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 4:32 IST
Last Updated 25 ಸೆಪ್ಟೆಂಬರ್ 2022, 4:32 IST
ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಭಾಷಾ ಕೌಶಲ’ ಕಾರ್ಯಾಗಾರದಲ್ಲಿ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎನ್‌.ಎಸ್. ಶ್ರೀಧರಮೂರ್ತಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಫ್ಲೇರ್ ಮೀಡಿಯಾದ ಎಸ್. ಲಲಿತಾ ಚಲಂ ಮಾತುಕತೆಯಲ್ಲಿ ತೊಡಗಿದ್ದರು. -        ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಭಾಷಾ ಕೌಶಲ’ ಕಾರ್ಯಾಗಾರದಲ್ಲಿ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎನ್‌.ಎಸ್. ಶ್ರೀಧರಮೂರ್ತಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಫ್ಲೇರ್ ಮೀಡಿಯಾದ ಎಸ್. ಲಲಿತಾ ಚಲಂ ಮಾತುಕತೆಯಲ್ಲಿ ತೊಡಗಿದ್ದರು. -        ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಪತ್ರಿಕೋದ್ಯಮ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕಗ್ಗಂಟಿನ ವಾತಾವರಣ ಇದೆ’ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಫ್ಲೇರ್‌ ಮೀಡಿಯಾ, ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ‘ಮಾಧ್ಯಮದಲ್ಲಿ ಭಾಷಾ ಕೌಶಲ’ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಇಂದಿನ ವಾತಾವರಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏನು ಹಾಗೂ ಯಾವ ವಿಷಯ ಕಲಿಸಬೇಕೆಂಬ ಗೊಂದಲದಲ್ಲಿ ಸಂಸ್ಥೆಗಳಿವೆ. ಮಾಧ್ಯಮ ಕ್ಷೇತ್ರದವರು ಈ ಗೊಂದಲ ಪರಿಹರಿಸಬೇಕು’ ಎಂದು ಅವರು ಕೋರಿದರು.

ADVERTISEMENT

‘ಸುದ್ದಿವಾಹಿನಿಗಳ ವೀಕ್ಷಣೆ ಬಿಟ್ಟರೆ ಆರೋಗ್ಯ ವೃದ್ಧಿಸಲಿದೆ ಎಂಬ ವಾತಾ ವರಣ ಈಗಿನದ್ದು. ದೃಶ್ಯ ಮಾಧ್ಯಮದಲ್ಲಿ ಕನ್ನಡ ಬಳಕೆ ಆಗುತ್ತಿದೆಯೇ ಎಂಬ ಸಂದೇಹವಿದೆ. ಟಿ.ವಿಗಳ ಭಾಷೆ ಬದಲಾಗಿದೆ. ಇದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ‘ಭಾಷೆಯೊಂದು ನಶಿಸಿದರೆ ಆ ಜನಾಂಗದ ಪರಂಪರೆ, ಇತಿಹಾಸವು ಕಣ್ಮರೆ ಆಗಲಿದೆ. ಮುಂದಿನ ಪೀಳಿಗೆಗೂ ಶುದ್ಧವಾದ ಭಾಷೆ ಉಳಿಸಿ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ. ಭಾಷಾ ಕೌಶಲವನ್ನು ವಿದ್ಯಾರ್ಥಿಗಳೇ ಕರಗತ ಮಾಡಿಕೊಳ್ಳಬೇಕು. ಯಾರೂ ಕಲಿಸುವುದಲ್ಲ’ ಎಂದರು.

‘ರಾಜಕಾರಣಿಗಳ ಹೆಸರಿಗೆ ದೃಶ್ಯ ಮಾಧ್ಯಮಗಳು ಕತ್ತರಿ ಹಾಕಿ ಬಳಸುತ್ತಿವೆ. ಈ ರೀತಿ ಬಳಸಲು ಮಾಧ್ಯಮಕ್ಕೆ ಅಧಿಕಾರ ಇಲ್ಲ. ತಮಿಳುನಾಡಿನಲ್ಲಿ ಈ ರೀತಿ ಕತ್ತರಿ ಪ್ರಯೋಗಿಸಿದರೆ ಕ್ರಮವಾಗಲಿದೆ’ ಎಂದು ಅವರು ಹೇಳಿದರು.

‘ಮಾಧ್ಯಮ ಅಕಾಡೆಮಿಯು 40ರ ಸಂಭ್ರಮದಲ್ಲಿದೆ. ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ನೆಲೆ ಕಲ್ಪಿಸಿದ ಹಿರಿಯರ ಕುರಿತು ಕೃತಿ ಹೊರತರಲಾಗುತ್ತಿದೆ’ ಎಂದರು.

ಭಾರತೀಯ ವಿದ್ಯಾಭವನದ ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥ ಎನ್‌.ಎಸ್. ಶ್ರೀಧರಮೂರ್ತಿ, ‘ಕೌಶಲಾಭಿವೃದ್ಧಿ ಮಂಡಳಿಯು ಭಾಷೆಯನ್ನು ಕೌಶಲ ವೆಂದು ಪರಿಗಣಿಸಿಲ್ಲ. ಕೌಶಲವೆಂದು ಪರಿಗಣಿಸಿದರೆ ವೃತ್ತಿಪರತೆ ಆಯಾಮ ಸಿಗಲಿದೆ. ವೃತ್ತಿಪರ ಆಯಾಮ ನೀಡುವ ಉದ್ದೇಶದಿಂದ 5 ಸ್ಥಳಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು’ ಎಂದು ಹೇಳಿದರು.

‘ಭವಿಷ್ಯದಲ್ಲಿ ಶುದ್ಧ ಭಾಷೆ ಉಳಿಯಬೇಕಿದ್ದರೆ ಮಾಧ್ಯಮಗಳ ಪಾತ್ರ ಬಹಳ ಮುಖ್ಯ’ ಎಂದು ಅವರು ನುಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಸಾಹಿತ್ಯದ ಓದು, ಭಾಷಾ ಕೌಶಲ ಹಾಗೂ ಭಾಷೆಯ ಬಳಕೆ ಕುರಿತು ಉಪನ್ಯಾಸ ನೀಡಿದರು.

ಫ್ಲೇರ್‌ ಮೀಡಿಯಾದ ನಿರ್ದೇಶಕಿ ಎಸ್‌.ಲಲಿತಾ ಚಲಂ ಹಾಜರಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.