ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ರಾಸಾಯನಿಕ ಮಿಶ್ರಿತ ಬಣ್ಣಗಳು ಕಣ್ಣಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೋಳಿ ಹಬ್ಬದ ಆಚರಣೆ ವೇಳೆ ನೈಸರ್ಗಿಕ ಬಣ್ಣಗಳನ್ನೇ ಬಳಸಬೇಕು’ ಎಂದು ನೇತ್ರ ತಜ್ಞರು ಮನವಿ ಮಾಡಿಕೊಂಡಿದ್ದಾರೆ.
‘ರಾಸಾಯನಿಕ ಬಣ್ಣಗಳು ಚರ್ಮದ ಜತೆಗೆ ಕಣ್ಣಿಗೂ ಅಪಾಯಕಾರಿ. ಹಾನಿಕಾರಕ ಬಣ್ಣವು ಕಣ್ಣಿಗೆ ಬಿದ್ದರೆ ಸೋಂಕು ಕಾಣಿಸಿಕೊಳ್ಳಲಿದೆ. ಬಣ್ಣಗಳಲ್ಲಿರುವ ಸೀಸದಿಂದ ಕಣ್ಣಿನ ಉರಿಯೂತ, ಅಲರ್ಜಿ, ತಾತ್ಕಾಲಿಕ ಅಂಧತ್ವ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೂವುಗಳು, ತರಕಾರಿಗಳು ಮತ್ತು ಇತರ ನೈಸರ್ಗಿಕ ಮೂಲಗಳಿಂದ ತಯಾರಿಸಿದ ಬಣ್ಣಗಳನ್ನೇ ಬಳಸಬೇಕು. ಇವು ಚರ್ಮ ಮತ್ತು ಕಣ್ಣುಗಳಿಗೆ ಸುರಕ್ಷಿತವಾಗಿರುವ ಜತೆಗೆ ಪರಿಸರ ಸ್ನೇಹಿಯೂ ಹೌದು’ ಎಂದು ಡಾ. ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ದೇವರಾಜ್ ತಿಳಿಸಿದ್ದಾರೆ.
‘ವಾಟರ್ ಬಲೂನ್‌ಗಳಿಂದ ಮನರಂಜನೆ ಸಿಗುತ್ತದೆಯಾದರೂ ಅವುಗಳಿಂದ ಕಣ್ಣಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಇವುಗಳಿಂದ ದೂರವಿರುವುದು ಉತ್ತಮ. ಈ ಸಮಯದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ’ ಎಂದು ಹೇಳಿದ್ದಾರೆ.
‘ಕಣ್ಣು ಕೆಂಪಾಗುವಿಕೆ, ಊತ ಅಥವಾ ತುರಿಕೆ ಕಾಣಿಸಿಕೊಂಡರೆ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಬೇಕು. ಹಬ್ಬದ ಸಂಭ್ರಮದಲ್ಲಿ ಮುಳುಗುವುದಕ್ಕೂ ಮೊದಲು ನಮ್ಮ ಕಣ್ಣುಗಳ ರಕ್ಷಣೆಯನ್ನೂ ನೋಡಿಕೊಳ್ಳಬೇಕು. ಎಚ್ಚರ ತಪ್ಪಿದರೆ ದೃಷ್ಟಿ ದೋಷಕ್ಕೆ ಒಳಗಾಗಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.