
ಬೆಂಗಳೂರು: ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಸಾರಿಗೆ ಇಲಾಖೆಯು ಎರಡು ತಿಂಗಳಿನಿಂದ ಹಾಲೊಗ್ರಾಂ ಪೂರೈಕೆ ಮಾಡಿಲ್ಲ. ಇದರಿಂದ ವಾಹನಗಳ ಮಾಲಿನ್ಯ ತಪಾಸಣೆ ನಡೆಸಿದ ಬಳಿಕ ನೀಡುವ ಪ್ರಮಾಣಪತ್ರಗಳಿಗೆ ಅಂಟಿಸಲು ಹಾಲೊಗ್ರಾಂ ಇಲ್ಲದಂತಾಗಿದೆ.
ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಚಾಲನಾ ಪರವಾನಗಿ (ಡಿಎಲ್) ಮತ್ತು ಅತಿ ಸುರಕ್ಷಿತ ನೋಂದಣಿ ಫಲಕಗಳ (ಎಸ್‌ಎಸ್‌ಆರ್‌ಪಿ) ನಕಲು ತಡೆಗಟ್ಟಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಹಾಲೊಗ್ರಾಂ ಸ್ಟಿಕ್ಕರ್ ಬಳಸಲಾಗುತ್ತಿದೆ. ಇದು ನಕಲು ಮಾಡಲು ಸಾಧ್ಯವಿಲ್ಲದ ಲೇಸರ್–ಕಟ್ ಭದ್ರತಾ ವೈಶಿಷ್ಟ್ಯ ಹೊಂದಿದ್ದು, ದಾಖಲೆಗಳ ದೃಢೀಕರಣ ಒದಗಿಸುತ್ತದೆ.
ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು ಸಾರಿಗೆ ಇಲಾಖೆಗೆ ₹ 1,000 ಪಾವತಿಸಿ ಹಾಲೊಗ್ರಾಂ ಪಡೆದರೆ ಒಂದು ಸಾವಿರ ವಾಹನಗಳಿಗೆ ಪ್ರಮಾಣಪತ್ರ ನೀಡಬಹುದು. ಹಾಲೊಗ್ರಾಂ ಖಾಲಿಯಾದಾಗ ಮತ್ತೆ ಹಣ ತುಂಬಿದರೆ ಪೂರೈಸಬೇಕು. ಆದರೆ, ಎರಡು ತಿಂಗಳಿನಿಂದ ಪೂರೈಸುತ್ತಿಲ್ಲ ಎಂದು ಮಾಲಿನ್ಯ ತಪಾಸಣೆ ಕೇಂದ್ರದ ಮಾಲೀಕರು ತಿಳಿಸಿದರು.
ಯಾಕೆ ಕೊಡುತ್ತಿಲ್ಲ:
‘ಹಾಲೊಗ್ರಾಂ ಪೂರೈಸುವಂತೆ ನಾವು ಕೇಳಿದರೆ, ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಅಧಿಕಾರಿಗಳು ಹೇಳುತ್ತಾ ಬಂದಿದ್ದರು. ಸರ್ಕಾರ ಅಂದರೆ ಅವರು ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಸಚಿವರ ಕಡೆಗೆ ಕೈ ತೋರಿಸುತ್ತಿದ್ದರು. ನಾವು ಸಚಿವರಿಗೆ, ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರಿಂದ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು. ಈ ಆದೇಶ ಬಂದು ಒಂದೂವರೆ ತಿಂಗಳು ಕಳೆದರೂ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಅಧಿಕಾರಿಗಳು ಅನುಷ್ಠಾನಗೊಳಿಸಿಲ್ಲ’ ಎಂದು ವಾಯುಮಾಲಿನ್ಯ ತಪಾಸಣೆ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಅಂದಾಜು ವೆಚ್ಚ ₹ 36 ಲಕ್ಷದಲ್ಲಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಕೆಪಿಪಿ ಪೋರ್ಟಲ್ ಮೂಲಕ ಟೆಂಡರ್ ಕರೆದು ಹಾಲೊಗ್ರಾಂ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರ ವೆಚ್ಚವನ್ನು ವಾಯುಮಾಲಿನ್ಯ ಮತ್ತು ಇತರ ಚಟುವಟಿಕೆಗಳ ನಿಯಂತ್ರಣ ಕ್ರಮಗಳ ಅನುಷ್ಠಾನದ ಇತರ ವೆಚ್ಚದಡಿ ಒದಗಿಸಿರುವ ಅನುದಾನದಲ್ಲಿ ಮತ್ತು ಅನುಮೋದನೆ ನೀಡಿರುವ ಕಾರ್ಯಕ್ರಮಗಳಲ್ಲಿ ಬಾಕಿ ಉಳಿದಿರುವ ಅನುದಾನದಲ್ಲಿ ಭರಿಸಬೇಕು ಎಂದೂ ತಿಳಿಸಲಾಗಿದೆ.
ಟೆಂಡರ್ ಆಗಿದೆ:
ಹಾಲೊಗ್ರಾಂ ಒದಗಿಸಲು ಟೆಂಡರ್ ಕರೆಯಲಾಗಿತ್ತು. ಜ.27ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 1ರ ಒಳಗೆ ವಾಹನ್ ಪೋರ್ಟಲ್‌ನಲ್ಲಿ ರಾಜ್ಯದ ತಂತ್ರಾಂಶ ಸಂಯೋಜನೆಗೊಳ್ಳಲೇಬೇಕು. ಆಗ ಎಲ್ಲ ಸಮಸ್ಯೆ ಪರಿಹಾರಗೊಳ್ಳಲಿದೆ. ಹಾಲೊಗ್ರಾಂ ಕೆಲವೇ ದಿನಗಳಲ್ಲಿ ವಿತರಣೆಯಾಗಲಿದೆರಾಮಲಿಂಗಾರೆಡ್ಡಿ ಸರಿಗೆ ಸಚಿವ
‘ಗ್ರಾಹಕರು ಒಪ್ಪುತ್ತಿಲ್ಲ’
ಆದೇಶ ಬಂದು ಒಂದೂವರೆ ತಿಂಗಳಾಗಿದೆ. ಟೆಂಡರ್ ಕರೆಯಲಾಗಿದೆ. ಪೂರೈಕೆ ಆಗುವವರೆಗೆ ಹಾಲೊಗ್ರಾಂ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲಿವರೆಗೆ ಏನು ಮಾಡುವುದು ಎಂದು ಕೇಳಿದರೆ ಹಾಲೊಗ್ರಾಂ ಇಲ್ಲದೆಯೇ ಪ್ರಮಾಣಪತ್ರ ನೀಡಿ ಎಂದು ಸಲಹೆ ನೀಡಿದ್ದಾರೆ. ಕೆಲವು ವಾಹನ ಮಾಲೀಕರು ಅಂಥ ಪ್ರಮಾಣಪತ್ರವನ್ನು ಒಯ್ಯುತ್ತಿದ್ದಾರೆ. ಹಾಲೋಗ್ರಾಂ ಬಗ್ಗೆ ಮಾಹಿತಿ ಇರುವ ಮಾಲೀಕರು ಒಪ್ಪುತ್ತಿಲ್ಲ. ಅಲ್ಲದೇ ಈ ಸ್ಟಿಕ್ಕರ್ ಇಲ್ಲದ ಪ್ರಮಾಣಪತ್ರಗಳಿಗೆ ಮೌಲ್ಯ ಕೂಡ ಇಲ್ಲ ಎಂದು ವಾಯುಮಾಲಿನ್ಯ ತಪಾಸಣೆ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷ ಯೋಗೇಶ್ ತಿಳಿಸಿದರು. ಹಾಲೊಗ್ರಾಮ್ ಇಲ್ಲದ ಪ್ರಮಾಣಪತ್ರವನ್ನು ಎಲ್ಲಿ ಬೇಕಾದರೂ ಮುದ್ರಿಸಿ ತರಬಹುದು. ಈ ಸ್ಟಿಕ್ಕರ್ ಇದ್ದರಷ್ಟೇ ನಕಲು ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.