ADVERTISEMENT

ಗೃಹ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ₹1.61 ಕೋಟಿ ವಂಚನೆ ಆರೋಪ: ‘ಎಸ್‌ಡಿಎ’ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 2:28 IST
Last Updated 30 ಸೆಪ್ಟೆಂಬರ್ 2021, 2:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಗೃಹ ಇಲಾಖೆಯಲ್ಲಿ ಸಹಾಯಕ ಹುದ್ದೆ ಕೊಡಿಸುವ ಆಮಿಷವೊಡ್ಡಿ 55 ಅಭ್ಯರ್ಥಿಗಳಿಂದ ₹ 1.61 ಕೋಟಿ ಹಣ ಪಡೆದು ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ವಂಚಿಸಿದ್ದ ಆರೋಪದಡಿ ಸಚಿವಾಲಯದ ಎಸ್‌ಡಿಎ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಅಭಿಯೋಜನಾ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ (ಎಸ್‌ಡಿಎ) ಶ್ರೀಲೇಖ, ಅವರ ಸ್ನೇಹಿತ ಮೋಹನ್ ಅಲಿಯಾಸ್ ಸಂಪತ್‌ಕುಮಾರ್ ಬಂಧಿತರು. ಇನ್ನೊಬ್ಬ ಆರೋಪಿ ರಾಧಾ ಉಮೇಶ್‌ ಎಂಬುವರು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆ ಮಾಡಿ ವಿಚಾರಣೆ ನಡೆಸಬೇಕಿದೆ. ಆರೋಪಿ ಸಂಪತ್‌ಕುಮಾರ್, ಈ ಹಿಂದೆ ವಿಕಾಸಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಬಿಟ್ಟ ನಂತರ, ಶ್ರೀಲೇಖ ಜೊತೆ ಒಡನಾಟವಿಟ್ಟುಕೊಂಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕುಮಾರಸ್ವಾಮಿ ಲೇಔಟ್‌ ನಿವಾಸಿ ಕೆ.ಜಿ. ಮಂಜುನಾಥ್ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದರು. ಅದರನ್ವಯ ಆರೋಪಿಗಳ ವಿರುದ್ಧ ಸೆ. 25 ರಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

ADVERTISEMENT

ಕೆಪಿಸಿಸಿ ಹೆಸರಿನಲ್ಲಿ ಪರಿಚಯ: ‘ದೂರುದಾರ ಮಂಜುನಾಥ್‌ ಅವರನ್ನು 2019ರ ಮಾರ್ಚ್‌ನಲ್ಲಿ ಪರಿಚಯಿಸಿಕೊಂಡಿದ್ದ ರಾಧಾ ಉಮೇಶ್, ತಾವು ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೆಂದು ಹೇಳಿಕೊಂಡಿದ್ದರು. ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯ ತಮಗಿದ್ದು, ಅವರ ಮೂಲಕ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಕೆಲಸವಿಲ್ಲದ ತಮ್ಮನಿಗೆ ದಿನಗೂಲಿ ನೌಕರರನ್ನು ಪೂರೈಸುವ ಏಜೆನ್ಸಿ ಕೊಡಿಸುವಂತೆ ಮಂಜುನಾಥ್ ಕೋರಿದ್ದರು. ಅವರಿಂದ ₹ 15 ಲಕ್ಷ ಪಡೆದಿದ್ದ ರಾಧಾ, ಯಾವುದೇ ಏಜೆನ್ಸಿ ಕೊಡಿಸಿರಲಿಲ್ಲ. ಆ ಬಗ್ಗೆ ದೂರುದಾರ ವಿಚಾರಿಸಿದಾಗ, ಹಣವನ್ನು ಶ್ರೀಲೇಖ ಅವರಿಗೆ ಕೊಟ್ಟಿರುವುದಾಗಿ ಹೇಳಿದ್ದರು. ಆರೋಪಿ ಶ್ರೀಲೇಖ ಅವರನ್ನು ದೂರುದಾರರಿಗೆ ಪರಿಚಯ ಸಹ ಮಾಡಿಸಿದ್ದರು’ ಎಂದೂ ತಿಳಿಸಿದರು.

‘ಏಜೆನ್ಸಿ ಕೊಡಿಸುವುದು ತಡವಾಗುವುದಾಗಿ ಹೇಳಿದ್ದ ಶ್ರೀಲೇಖ, ತ್ವರಿತವಾಗಿ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ‘ಗೃಹ ಇಲಾಖೆಯಲ್ಲಿ ಕಿರಿಯ ಸಹಾಯಕ, ಹಿರಿಯ ಸಹಾಯಕ ಮತ್ತು ಅಧೀಕ್ಷಕ ಹುದ್ದೆಗಳು ಖಾಲಿ ಇವೆ. ನಿಮ್ಮ ತಮ್ಮನಿಗೆ ಒಂದು ಹುದ್ದೆ ಕೊಡಿಸುತ್ತೇನೆ. ಬೇರೆ ಯಾರಿಗಾದರೂ ಕೆಲಸ ಬೇಕಿದ್ದರೆ ಹಣ ಕೊಡಿಸಿ, ಅವರಿಗೂ ಸರ್ಕಾರಿ ಕೆಲಸ ಸಿಗುತ್ತದೆ’ ಎಂಬುದಾಗಿ ಶ್ರೀಲೇಖ ತಿಳಿಸಿದ್ದರು. ಮಾತು ನಂಬಿದ್ದ ದೂರುದಾರ, ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಂತ ಹಂತವಾಗಿ ₹ 1.61 ಕೋಟಿ ಹಣವನ್ನು ಆರೋಪಿಗಳಿಗೆ ಕೊಡಿಸಿದ್ದರು. ಈ ಅಂಶವೂ ದೂರಿನಲ್ಲಿದೆ’ ಎಂದೂ ಅಧಿಕಾರಿ ವಿವರಿಸಿದರು.

ನಕಲಿ ನೇಮಕಾತಿ ಆದೇಶ ಪ್ರತಿ: ‘ಹಣ ಪಡೆದಿದ್ದ ಆರೋಪಿಗಳು, ನಕಲಿ ನೇಮಕಾತಿ ಆದೇಶ ಪ್ರತಿ ತಯಾರಿಸಿ ಕೆಲ ಅಭ್ಯರ್ಥಿಗಳಿಗೆ ನೀಡಿದ್ದರು. ಕೆಲಸಕ್ಕೆ ಹಾಜರಾಗಲು ಸಚಿವಾಲಯಕ್ಕೆ ಅಭ್ಯರ್ಥಿಗಳು ಹೋದಾಗ, ಆದೇಶ ಪ್ರತಿ ನಕಲಿ ಎಂಬುದು ಗೊತ್ತಾಗಿತ್ತು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.