ADVERTISEMENT

ಶಂಕಿತ ಉಗ್ರರ ಬಂಧಿಸಿದ್ದ ಐಎಸ್‌ಡಿ ತಂಡಕ್ಕೆ ಪದಕ

ದೇಶಕ್ಕೆ ಮಾದರಿಯಾದ ಕರ್ನಾಟಕ ಪೊಲೀಸರ ತನಿಖೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 20:05 IST
Last Updated 31 ಅಕ್ಟೋಬರ್ 2020, 20:05 IST
ಎಸ್‌.ಕೆ.ಉಮೇಶ್
ಎಸ್‌.ಕೆ.ಉಮೇಶ್   

ಬೆಂಗಳೂರು: ಮತೀಯ ಗಲಭೆ ಸೃಷ್ಟಿಸಲು ಹಾಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಶಂಕಿತ ಉಗ್ರರನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದ ರಾಜ್ಯದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ವಿಶೇಷ ತಂಡಕ್ಕೆ, ಕೇಂದ್ರ ಗೃಹ ಸಚಿವಾಲಯದ 2020ನೇ ಸಾಲಿನ ಪದಕ ಲಭಿಸಿದೆ.

ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಪ್ರತಿ ವರ್ಷವೂ ಈ ಪದಕ ನೀಡಲಾಗುತ್ತದೆ.

ಐಎಸ್‌ಡಿ ವಿಶೇಷ ತಂಡದಲ್ಲಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ, ಡಿವೈಎಸ್ಪಿಗಳಾದ ಡಿ. ಕುಮಾರ್, ಎಸ್‌.ಕೆ. ಉಮೇಶ್, ಇನ್‌ಸ್ಪೆಕ್ಟರ್ ಆರ್. ಸುಶೀಲಾ, ಕಾನ್‌ಸ್ಟೆಬಲ್‌ಗಳಾದ ವೈ.ಶಂಕರ್ ಹಾಗೂ ಎನ್‌.ಪ್ರಕಾಶ್ ಪದಕಕ್ಕೆ ಪಾತ್ರರಾಗಿದ್ದಾರೆ.

ADVERTISEMENT

ದೇಶಕ್ಕೆ ಮಾದರಿಯಾದ ತನಿಖೆ: ಐಎಸ್‌ (ಇಸ್ಲಾಮಿಕ್ ಸ್ಟೇಟ್) ಹಾಗೂ ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳ ಜೊತೆ ಶಂಕಿತರಾದ ಮೆಹಬೂಬ್ ಪಾಷಾ, ಖ್ವಾಜಾ ಮೊಹಿನುದ್ದೀನ್ ಹಾಗೂ ಇತರರರು ಸಂಪರ್ಕವಿಟ್ಟುಕೊಂಡಿದ್ದರು.

ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಮತೀಯ ಗಲಭೆ ಸೃಷ್ಟಿಸಲು ಹಾಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಶಂಕಿತ ಉಗ್ರರು ನಿರಂತರವಾಗಿ ಸಂಚು ರೂಪಿಸುತ್ತಿದ್ದರು. ಅದರ ಭಾಗವಾಗಿ ತಮಿಳುನಾಡಿನಲ್ಲಿ ಇನ್‌ಸ್ಪೆಕ್ಟರ್ ವಿಲ್ಸನ್ ಎಂಬುವರನ್ನು ಹತ್ಯೆ ಮಾಡಿದ್ದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೂ ಬಾಂಬ್ ಬೆದರಿಕೆ ಹಾಕಿದ್ದರು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ‘ಅಲ್‌ ಹಿಂದ್’ ಟ್ರಸ್ಟ್ ಕಟ್ಟಿಕೊಂಡಿದ್ದ ಶಂಕಿತರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜಮೀನು ಖರೀದಿಸಿದ್ದರು. ಅಲ್ಲಿಯೇ ಭಯೋತ್ಪಾದನೆ ತರಬೇತಿ ನೀಡಲಾರಂಭಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ತಮಿಳುನಾಡು ಪೊಲೀಸರು, ತನಿಖೆಗಾಗಿ ಕರ್ನಾಟಕ ಪೊಲೀಸರ ನೆರವು ಕೋರಿದ್ದರು.

ಐಎಸ್‌ಡಿ ಹಾಗೂ ಸಿಸಿಬಿ ವಿಭಾಗದ ಪೊಲೀಸರು, ಶಂಕಿತರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ ಶಂಕಿತ ಮೆಹಬೂಬ್ ಪಾಷಾನನ್ನು ಬಂಧಿಸಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಮುಂದುವರಿಸಿದ್ದ ಐಎಸ್‌ಡಿ ವಿಶೇಷ ತಂಡ, ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ, ಪ್ರಕರಣವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆ ಆಗಿತ್ತು. ಐಎಸ್‌ಡಿ ಪೊಲೀಸರ ತನಿಖೆಯು ಇಡೀ ದೇಶಕ್ಕೆ ಮಾದರಿಯೆಂದು ಅಭಿಪ್ರಾಯಪಟ್ಟಿರುವ ಕೇಂದ್ರ ಗೃಹ ಸಚಿವಾಲಯ, ಪದಕ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.