ADVERTISEMENT

ಉದ್ಯಾನದ ಕಾವಲಿಗಿದ್ದ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ  

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 9:16 IST
Last Updated 5 ಜುಲೈ 2020, 9:16 IST

ಬೆಂಗಳೂರು: ದಾಸರಹಳ್ಳಿಯ ರಾಚೇನಹಳ್ಳಿ ಕೆರೆ ಉದ್ಯಾನದ ಕಾವಲಿಗಿದ್ದ ಗೃಹ ರಕ್ಷಕ ಸಿಬ್ಬಂದಿ ಎಂ.ಎಸ್. ಮಂಜುನಾಥ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೇ 2ರಂದು ನಡೆದಿರುವ ಘಟನೆ ಸಂಬಂಧ ಮಂಜುನಾಥ್ ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿ ಸಿ.ರಾಘವೇಂದ್ರ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೊರೊನಾ ನಿಯಂತ್ರಣದ ಸಲುವಾಗಿ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮಾತ್ರ ಉದ್ಯಾನದಲ್ಲಿ ಸಾರ್ವಜನಿಕರ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ರಾಚೇನಹಳ್ಳಿ ಕೆರೆ ಉದ್ಯಾನದ ಗೇಟ್‌ ಮುಚ್ಚುತ್ತಿದ್ದ ಮಂಜುನಾಥ್, ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದ ಆರೋಪಿ ರಾಘವೇಂದ್ರ ಅವರಿಗೆ ಹೊರಗೆ ಹೋಗುವಂತೆ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ‘ನೀನುಯಾರು ನನ್ನನ್ನು ಕೇಳಲು. ಬೆಳಿಗ್ಗೆ 10ರವರೆಗೂ ನಾನು ವಾಯುವಿಹಾರ ಮಾಡುತ್ತೇನೆ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು’ ಎಂದೂ ಪೊಲೀಸರು ಹೇಳಿದರು.

ADVERTISEMENT

‘ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ, ಮಂಜುನಾಥ್ ಅವರ ಮುಖಕ್ಕೆ ಆರೋಪಿ ಹೊಡೆದಿದ್ದರು. ಮೂಗಿನಿಂದ ರಕ್ತ ಬರಲಾರಂಭಿಸಿತ್ತು. ಸಹಾಯಕ್ಕೆ ಬಂದ ವ್ಯಕ್ತಿಯೊಬ್ಬರು, ಮಂಜುನಾಥ್ ಅವರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.