ADVERTISEMENT

ಮುಂದಿನ ತಿಂಗಳು ಗೃಹ ಆರೋಗ್ಯ ಜಾರಿ: ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 15:33 IST
Last Updated 6 ಆಗಸ್ಟ್ 2024, 15:33 IST
ಮಧುಮೇಹ ಚಿಕಿತ್ಸಾ ತರಬೇತಿ ಕುರಿತ ಒಪ್ಪಂದದ ಪ್ರತಿಗಳನ್ನು ದಿನೇಶ್ ಗುಂಡೂರಾವ್ ಹಾಗೂ ವಿಕ್ರಾಂತ್ ಶ್ರೋತ್ರಿಯ ಪ್ರದರ್ಶಿಸಿದರು. ಡಾ. ತ್ರಿವೇಣಿ ಎಂ.ಜಿ., ನವೀನ್ ಭಟ್ ಹಾಗೂ ಜಾನ್ ಡಾಬರ್ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಮಧುಮೇಹ ಚಿಕಿತ್ಸಾ ತರಬೇತಿ ಕುರಿತ ಒಪ್ಪಂದದ ಪ್ರತಿಗಳನ್ನು ದಿನೇಶ್ ಗುಂಡೂರಾವ್ ಹಾಗೂ ವಿಕ್ರಾಂತ್ ಶ್ರೋತ್ರಿಯ ಪ್ರದರ್ಶಿಸಿದರು. ಡಾ. ತ್ರಿವೇಣಿ ಎಂ.ಜಿ., ನವೀನ್ ಭಟ್ ಹಾಗೂ ಜಾನ್ ಡಾಬರ್ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನೆ ಬಾಗಿಲಲ್ಲಿಯೇ ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಒದಗಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ಮುಂದಿನ ತಿಂಗಳು ರಾಜ್ಯದಲ್ಲಿ ಜಾರಿ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆರೋಗ್ಯ ಇಲಾಖೆ ಹಾಗೂ ನೊವೊ ನಾರ್ಡಿಸ್ಕ್ ಎಜುಕೇಷನ್ ಫೌಂಡೇಷನ್ ಜಂಟಿಯಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಧುಮೇಹ ಚಿಕಿತ್ಸೆ ತರಬೇತಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಗೃಹ ಆರೋಗ್ಯ ಯೋಜನೆ ಜಾರಿಗೆ ಸಚಿವ ಸಂಪುಟದಲ್ಲಿ ಈಗಾಗಲೇ ಅನುಮೋದನೆ ದೊರೆತಿದೆ. ‌ಯೋಜನೆ ಚಾಲನೆಗೆ ದಿನಾಂಕ ನಿಗದಿ ಮಾಡಲು ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಲಾಗುವುದು. ಈ ಯೋಜನೆಗೆ ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ ಎಂಟು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಮಧುಮೇಹ ಸೇರಿ ವಿವಿಧ ಸಮಸ್ಯೆಗಳ ಪತ್ತೆಗೆ ಅಲ್ಲಿನ ಎಲ್ಲ ಮನೆಗಳ ಕುಟುಂಬದ ಸದಸ್ಯರಿಗೆ ತಪಾಸಣೆ ನಡೆಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೆಲವರು ನಿಯಮಿತವಾಗಿ ಮಾತ್ರೆಗಳನ್ನು ಸೇವಿಸುತ್ತಿಲ್ಲ. ಆರ್ಥಿಕ ಹೊರೆ ಸೇರಿ ವಿವಿಧ ಕಾರಣಗಳಿಂದ ಮಾತ್ರೆಗಳನ್ನು ಖರೀದಿಸುತ್ತಿಲ್ಲ. ಗೃಹ ಆರೋಗ್ಯ’ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ಮಾತನಾಡಿ, ‘ನೊವೊ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್ ನೆರವಿನಿಂದ ಇಲಾಖೆಯಡಿಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ವೈದ್ಯರಿಗೆ ಮಧುಮೇಹ ಚಿಕಿತ್ಸೆ, ಆರೈಕೆ ಮತ್ತು ರೋಗ ಪತ್ತೆ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ತಿಳಿಸಿದರು.  

ನೊವೊ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್ ಟ್ರಸ್ಟಿ ವಿಕ್ರಾಂತ್ ಶ್ರೋತ್ರಿಯ, ನೊವೊ ನಾರ್ಡಿಸ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾನ್ ಡಾಬರ್ ಹಾಗೂ ರಾಜ್ಯ​ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ನಿರ್ದೇಶಕಿ ಡಾ. ತ್ರಿವೇಣಿ ಎಂ.ಜಿ. ಉಪಸ್ಥಿತರಿದ್ದರು.

‘ರೋಗ ಪತ್ತೆಗೆ ಆದ್ಯತೆ’
‘ರಾಸಾಯನಿಕಯುಕ್ತ ಆಹಾರ ಸೇವನೆ ಬದಲಾದ ಜೀವನಶೈಲಿ ವಾಯು ಹಾಗೂ ಜಲ ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿವೆ. ರೋಗಕ್ಕೆ ಚಿಕಿತ್ಸೆ ನೀಡುವ ಜತೆಗೆ ರೋಗ ಬರದಂತೆ ತಡೆಯುವುದು ಮುಖ್ಯ. ಆದ್ದರಿಂದ ರೋಗ ಪತ್ತೆ ಸಂಬಂಧ ತಪಾಸಣೆಗೆ ಆದ್ಯತೆ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದಲ್ಲಿ ಚಿಕಿತ್ಸೆಯೂ ಸುಲಭವಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.  ‘ನೊವೊ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್ ಜತೆಗಿನ ಒಪ್ಪಂದದ ಪ್ರಕಾರ ಮಧುಮೇಹ ಪತ್ತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ‘ಸಮುದಾಯ ಮಧುಮೇಹ ಕೇಂದ್ರ’ (ಸಿಡಿಸಿ) ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ ದಕ್ಷಿಣ ಕನ್ನಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.