
ಜಿ.ಪರಮೇಶ್ವರ
ಬೆಂಗಳೂರು: ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಪದೇ ಪದೇ ಕೊಲೆಗಳು ನಡೆಯುತ್ತಿರುವ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ
ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿವೆ. ಇದಕ್ಕ ಕಾರಣ ಏನು ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದೇನೆ. ಸಾಧ್ಯವಾದರೆ ನಾನೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸುತ್ತೇನೆ’ ಎಂದರು.
ಅಂಜಲಿ ಎಂಬ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಈ
ಪ್ರಕರಣದಲ್ಲಿ ಲೋಪ ಎಸಗಿದ ಆರೋಪದ ಮೇಲೆ ಕೆಲವು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು
ಹೇಳಿದರು.
ಯುವತಿಗೆ ಬೆದರಿಕೆ ಇದ್ದ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಲಿಖಿತ ದೂರು ಸಲ್ಲಿಸಿ ರಲಿಲ್ಲ, ಮೌಖಿಕವಾಗಿ ತಿಳಿಸಿದ್ದರು ಎಂಬ ಮಾಹಿತಿ ಇದೆ. ಆದರೂ,
ಕರ್ತವ್ಯಲೋಪದ ಆರೋಪದಡಿ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ
ಜರುಗಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.