ADVERTISEMENT

ಮಧುಬಲೆ ಪ್ರಕರಣ: ಸಚಿವ ರಾಜಣ್ಣ ಪಿ.ಎ, ಅಂಗರಕ್ಷಕರ ವಿಚಾರಣೆ

ಮಾರ್ಚ್‌ ಆರಂಭದಲ್ಲಿ ಮಧುಬಲೆಗೆ ಕೆಡವಲು ಯತ್ನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 16:00 IST
Last Updated 31 ಮಾರ್ಚ್ 2025, 16:00 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ಬೆಂಗಳೂರು: ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಮಧುಬಲೆಗೆ (ಹನಿಟ್ರ್ಯಾಪ್‌) ಕೆಡವಲು ಯತ್ನಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಪ್ರಕರಣದ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಪ್ರಕರಣದ ತನಿಖೆ ನಡೆಸುವಂತೆ ಕೋರಿ ರಾಜಣ್ಣ ಅವರು ನೀಡಿದ ಪತ್ರವೊಂದನ್ನು ಆಧರಿಸಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಸಿಐಡಿ ತನಿಖೆಗೆ ಸೂಚನೆ ನೀಡಿದ್ದರು. ಸಿಐಡಿ ಪೊಲೀಸರು ಹಲವು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ರಾಜಣ್ಣ ಅವರ ಆಪ್ತ ಸಹಾಯಕ (ಪಿ.ಎ), ಇಬ್ಬರು ಅಂಗರಕ್ಷಕರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಸಚಿವರನ್ನು ಮಧುಬಲೆಗೆ ಕೆಡವಲು ಬಂದವರು ಯಾರು? ಯಾವ ದಿನ ಬಂದಿದ್ದರು? ಫೋಟೊ ತೋರಿಸಿದರೆ ಆ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಜಯಮಹಲ್‌ ರಸ್ತೆಯಲ್ಲಿರುವ ಗೆಸ್ಟ್‌ಹೌಸ್‌ನಲ್ಲಿರುವ ಡೈರಿಯನ್ನು ವಶಕ್ಕೆ ಪಡೆಯಲಾಗಿದೆ. ಆ ಡೈರಿಯಲ್ಲಿ ನಮೂದಿಸಿರುವ ಮೊಬೈಲ್‌ ಫೋನ್‌ ಸಂಖ್ಯೆಗಳನ್ನು ಪರಿಶೀಲನೆ ನಡೆಸಲಾಗಿದೆ. ಅಗತ್ಯವಿದ್ದರೆ, ಕೆಲವರನ್ನು ವಿಚಾರಣೆಗೆ ಕರೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

ಪತ್ರದ ಕೆಲವು ಅಂಶಗಳು ಬಹಿರಂಗ: ರಾಜಣ್ಣ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮೂರು ಪುಟಗಳ ಪತ್ರ ನೀಡಿ ತನಿಖೆಗೆ ಕೋರಿದ್ದರು. ಪತ್ರದ ಕೆಲವು ಅಂಶಗಳು ಬಹಿರಂಗವಾಗಿವೆ.

‘ಸರ್ಕಾರಿ ಬಂಗಲೆ ಹಾಗೂ ಮಧುಗಿರಿಯ ಮನೆಯಲ್ಲಿ ಹನಿಟ್ರ್ಯಾಪ್‌ಗೆ ಯತ್ನ ನಡೆದಿತ್ತು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘30 ರಿಂದ 35 ವರ್ಷದೊಳಗಿನ ವ್ಯಕ್ತಿಯ ಜತೆಗೆ ಅಂದಾಜು 25 ವರ್ಷದ ಯುವತಿ 2025ರ ಮಾರ್ಚ್‌ ಆರಂಭದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಬೆಂಗಳೂರಿನ ಸರ್ಕಾರಿ ವಸತಿ ಗೃಹಕ್ಕೆ ಬಂದಿದ್ದರು. ಬಂದವರು, ವೈಯಕ್ತಿಕವಾಗಿ ಭೇಟಿ ಮಾಡಬೇಕು ಎಂದು ಹೇಳಿದ್ದರು. ಆಗ ನಾನು ವೈಯಕ್ತಿಕ ಭೇಟಿಯ ಅಗತ್ಯವಿಲ್ಲ. ನಿಮ್ಮ ಅಹವಾಲು ತಿಳಿಸಿ ಎಂದು ಹೇಳಿದ್ದೆ. ಅದಕ್ಕೆ ಅವರು ಇನ್ನೊಮ್ಮೆ ಬರುವುದಾಗಿ ಹೇಳಿ ಹೊರಟು ಹೋದರು’ ಎಂದು ರಾಜಣ್ಣ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.

‘ಪತ್ರದಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿ ಹಾಗೂ ಯುವತಿ ಜೊತೆಯಾಗಿ ಬಂದ ದಿನದಂದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯವನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ಘಟನೆ ನಡೆದ ಸ್ಥಳದ ದೃಶ್ಯಾವಳಿ ಇನ್ನೂ ಸಿಕ್ಕಿಲ್ಲ. ಅಂದು ಸಚಿವರ ಮನೆಗೆ ಬಂದಿದ್ದವರು ಯಾರು ಎಂಬುದು ಪತ್ತೆಯಾದರೆ ತನಿಖೆಗೆ ವೇಗ ಸಿಗಲಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.