ಬೆಂಗಳೂರು: ಜೈವಿಕ್ ಕೃಷಿ ಸೊಸೈಟಿ ಮತ್ತು ತೋಟಗಾರಿಕೆ ಇಲಾಖೆಯ ಪರಂಪರಾಗತ ಕೃಷಿ ವಿಕಾಸ ಯೋಜನೆ ಸಹಯೋಗದೊಂದಿಗೆ ಮೇ 23ರಿಂದ 25ರವರೆಗೆ ಲಾಲ್‌ಬಾಗ್‌ನ ಡಾ. ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ‘ಸಾವಯವ ಮಾವು ಮತ್ತು ಹಲಸು ಹಬ್ಬ’ ಆಯೋಜಿಸಲಾಗಿದೆ.
23ರಂದು ಮಧ್ಯಾಹ್ನ 3ಕ್ಕೆ ಹಬ್ಬ ಉದ್ಘಾಟನೆಯಾಗಲಿದೆ. 24 ಮತ್ತು 25ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಪ್ರದರ್ಶನ ಮತ್ತು ಮಾರಾಟವಿರಲಿದೆ. ಹಬ್ಬದಲ್ಲಿ ರಾಜ್ಯದ ಸಾವಯವ ಕೃಷಿಕರ ತೋಟಗಳ ಬೈರಸಂದ್ರ, ಹೆಜ್ಜೇನು, ಕೆಂಪು ಮತ್ತು ಬಿಳಿ ಅಂಟಿಲ್ಲದ ಹಲಸಿನ ತಳಿಗಳು, ರುದ್ರಾಕ್ಷಿ, ಚಂದ್ರ ಹಲಸಿನ ತಳಿಗಳು ಸೇರಿ 50ಕ್ಕೂ ಹೆಚ್ಚು ತಳಿಗಳ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ನೈಸರ್ಗಿಕ ಕೃಷಿಯಲ್ಲಿ ಬೆಳೆದು, ಸ್ವಾಭಾವಿಕವಾಗಿ ಮಾಗಿಸಿರುವ ವಿವಿಧ ಜಾತಿಯ ಮಾವಿನ ಹಣ್ಣುಗಳು, ಜ್ಯೂಸ್ ತಯಾರಿಸುವ ಬಿಲ್ವ ಹಣ್ಣುಗಳು ಜೊತೆಗೆ, ಇತರೆ ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಮರೆತುಹೋದ ಆಹಾರ ಪದಾರ್ಥಗಳೂ ಮೇಳದಲ್ಲಿರಲಿದೆ ಎಂದು ಜೈವಿಕ್ ಕೃಷಿಕ್ ಸೊಸೈಟಿಯ ಕೆ. ರಾಮಕೃಷ್ಣಪ್ಪ ತಿಳಿಸಿದ್ದಾರೆ.
ವಿವಿಧ ಸ್ಪರ್ಧೆ: ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವಲ್ಲದೇ, ಮಕ್ಕಳಿಗಾಗಿ ಹಲಸು, ಮಾವಿನ ಹಣ್ಣು ಮತ್ತು ಸಾವಯವ ರೈತರ ಚಿತ್ರಲೇಖನ ಸ್ಪರ್ಧೆ ಇರುತ್ತದೆ. ದೊಡ್ಡವರಿಗೆ ಹಲಸಿನ ಹಣ್ಣಿನ ತೂಕ ಊಹಿಸುವ ಮತ್ತು ಹಲಸಿನ ಹಣ್ಣು ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸಸಿಗಳು ಲಭ್ಯ: ಹಲವು ಜಾತಿಯ ಹಲಸು, ಮಾವಿನ ಹಣ್ಣಿನ ಗಿಡಗಳು, ದೇಸಿ ತರಕಾರಿ ಬೀಜಗಳು ಪ್ರದರ್ಶನದಲ್ಲಿರುತ್ತವೆ. ಸ್ಥಳದಲ್ಲೇ ಹಲಸಿನ ದೋಸೆ ಮತ್ತು ಕಾಯಿಚಟ್ನಿ ಸವಿಯಬಹುದು. ಮಾವು ಮತ್ತು ಇತರೆ ಸಾವಯವ ವಸ್ತುಗಳಿಂದ ತಯಾರಿಸಿದ ವಿವಿಧ ತಿಂಡಿ ತಿನಿಸುಗಳ ಪ್ರದರ್ಶನ–ಮಾರಾಟವಿರುತ್ತದೆ.
ಯಾರೆಲ್ಲ ಬರುತ್ತಾರೆ?: ಪಾರಂಪರಿಕ ಕೃಷಿ ಯೋಜನೆ ಫಲಾನುಭವಿ ಗುಂಪುಗಳು, ನೋಂದಾಯಿತ ಸಾವಯವ ಕೃಷಿಕರ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಪರಿಸರ ಪ್ರಿಯ ಕೃಷಿಕರು, ಯುವಕರು, ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮಾಹಿತಿಗೆ: ಮಂಜು– 7090009944 ಸಂಪರ್ಕಿಸಬಹುದು ಕವಿತಾ– 8105579839
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.