
ಬೆಂಗಳೂರು: ನಗರವಾಸಿಗಳು, ವಿದ್ಯಾರ್ಥಿಗಳು, ಐ.ಟಿ. ಕ್ಷೇತ್ರದಲ್ಲಿ ಇರುವವರಿಗೆ ತೋಟಗಾರಿಕೆ ಹಾಗೂ ಸ್ಥಳೀಯ ಸಸ್ಯ ಸಂಪನ್ಮೂಲಗಳನ್ನು ಪರಿಚಯಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಿಸಿರುವ ‘ತೋಟಗಾರಿಕೆ ಪ್ರವಾಸೋದ್ಯಮ’ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಯ 35 ಎಕರೆ ಪ್ರದೇಶದ ಸಸ್ಯಕ್ಷೇತ್ರವನ್ನು ಗುರುತಿಸಿ, ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಸಸ್ಯಗಳ ಜೀವವೈವಿಧ್ಯತೆಯ ಜೊತೆಗೆ ತೋಟಗಾರಿಕೆ ಪ್ರವಾಸೋದ್ಯಮದ ಮಾದರಿ ರೂಪಿಸಲು ₹30 ಲಕ್ಷದಿಂದ ₹40 ಲಕ್ಷ ವೆಚ್ಚ ಮಾಡಲಾಗಿದೆ. ಇದುವರೆಗೆ ಯಾರೂ ಬಂದಿಲ್ಲ. ಕೇವಲ ಶಾಲಾ ಮಕ್ಕಳು ಮಾತ್ರ ಭೇಟಿ ನೀಡುತ್ತಿದ್ದಾರೆ.
‘ಈ ಪ್ರವಾಸದಲ್ಲಿ ತೋಟಗಾರಿಕೆ ಅನುಭವ ನೀಡುವುದು. ಕುಂಡಗಳನ್ನು ಸಿದ್ಧಪಡಿಸುವುದು, ಸಸಿಗಳನ್ನು ಬೆಳೆಸುವುದು, ಎರೆಹುಳು ಗೊಬ್ಬರ ತಯಾರಿಕೆ ವಿಧಾನ, ಜೇನು ಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಇದೆ. ಸಾರ್ವಜನಿಕರು ಒಂದು ದಿನದ ಪ್ರವಾಸಕ್ಕಾಗಿ ಯಾವುದೊ ರೆಸಾರ್ಟ್‌ಗೆ ಹೋಗುವ ಬದಲು ಮಕ್ಕಳ ಜೊತೆಗೆ ಇಲ್ಲಿಗೆ ಬರಬೇಕು. ಇಲ್ಲಿ ತೋಟಗಾರಿಕೆ ಚಟುವಟಿಕೆಗಳನ್ನು ನೋಡುವುದರ ಜೊತೆಗೆ ಇದರಲ್ಲಿ ಭಾಗವಹಿಸಬಹುದು’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.
‘ತಿಪ್ಪಗೊಂಡನಹಳ್ಳಿ ಸಸ್ಯಕ್ಷೇತ್ರಕ್ಕೆ ಭೇಟಿ ನೀಡುವ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಾಗೂ ಆಧುನಿಕ ತೋಟಗಾರಿಕೆ ಕುರಿತು ಅರಿವು ಮೂಡಿಸುವುದು ತೋಟಗಾರಿಕೆ ಪ್ರವಾಸೋದ್ಯಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಹಾಗೂ ನಗರವಾಸಿಗಳು ವಿವಿಧ ತೋಟಗಾರಿಕೆ ಚಟುವಟಿಕೆಗಳ ಅನುಭವ ಪಡೆದುಕೊಳ್ಳಬೇಕಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು’ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ.ಎಂ.ಪರಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಿಪ್ಪಗೊಂಡನಹಳ್ಳಿ ಸಸ್ಯಕ್ಷೇತ್ರಕ್ಕೆ ಶಾಲಾ ಮಕ್ಕಳು ಉಚಿತವಾಗಿ ಭೇಟಿ ನೀಡುತ್ತಿದ್ದಾರೆ. ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸುವ ಕುರಿತು ಪ್ರಸ್ತಾವ ಸಲ್ಲಿಕೆ ಆಗಿದೆ. ತೋಟಗಾರಿಕೆ ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.
‘ಬೆಳಗಾವಿ ಜಿಲ್ಲೆಯ ಶಿಡಗನಹಳ್ಳಿಯಲ್ಲಿಯೂ 50 ಎಕರೆ ಪ್ರದೇಶದ ತೋಟಗಾರಿಕೆ ಸಸ್ಯಕ್ಷೇತ್ರವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು.
‘ತೋಟಗಾರಿಕೆ ಪ್ರವಾಸೋದ್ಯಮ ಉತ್ತೇಜಿಸಲು ತೋಟಗಾರಿಕೆ ಇಲಾಖೆಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಶಿವಗಂಗೆ ತಿಪ್ಪಗೊಂಡನಹಳ್ಳಿಗೆ ಒಂದು ದಿನದ ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ’ ಎಂದು ಪರಶಿವಮೂರ್ತಿ ತಿಳಿಸಿದರು.
‘ಇದು ಗುರುವಾರದಿಂದ ಭಾನುವಾರದವರೆಗೆ ಇರಲಿದೆ. ಬೆಳಿಗ್ಗೆ 6.30ಕ್ಕೆ ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿಯಿಂದ ವಾಹನ ಹೊರಡಲಿದ್ದು, ಸಂಜೆ 6ಗಂಟೆಗೆ ಬೆಂಗಳೂರಿಗೆ ಹಿಂದಿರುಗಲಿದೆ. ಇದಕ್ಕಾಗಿ ₹1,400 ಶುಲ್ಕ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.
ಮಾಹಿತಿಗೆ: https://kstdc.co/tour_packages/shivagange-tippagondanahalli-farm-tour/, 080-43344334/ 8970650070
ಕೆ.ಎಂ. ಪರಶಿವಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.