ADVERTISEMENT

ಹೊಸಕೆರೆಹಳ್ಳಿ ಮೇಲ್ಸೇತುವೆ: ಮುಂದಿನ ವಾರ ಪ್ರಾಯೋಗಿಕ ಸಂಚಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 19:51 IST
Last Updated 5 ನವೆಂಬರ್ 2025, 19:51 IST
<div class="paragraphs"><p>ಹೊಸಕೆರೆಹಳ್ಳಿ ಬಳಿಯ ಕೆ.ಇ.ಬಿ. ಜಂಕ್ಷನ್‌ ಮೇಲ್ಸೇತುವೆ</p></div>

ಹೊಸಕೆರೆಹಳ್ಳಿ ಬಳಿಯ ಕೆ.ಇ.ಬಿ. ಜಂಕ್ಷನ್‌ ಮೇಲ್ಸೇತುವೆ

   

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಕೋಡಿ ಜಂಕ್ಷನ್‌ನಲ್ಲಿ ಮೇಲ್ಸೇತುವೆಯಲ್ಲಿ ಮುಂದಿನ ವಾರ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೇಲ್ಸೇತುವೆಯ ಎರಡೂ ಬದಿಯ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಬೇಕು. ಹಾಳಾದ ಭಾಗಗಳನ್ನು ಕೂಡಲೇ ದುರಸ್ತಿಪಡಿಸಬೇಕು. ಕಟ್ಟಡ ಭಗ್ನಾವಶೇಷ/ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿನ 500 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ 90 ರಷ್ಟು ಪೂರ್ಣಗೊಂಡಿದ್ದು, ಮೇಲ್ಸೇತುವೆ ಮಧ್ಯಭಾಗದಲ್ಲಿ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಎರಡೂ ಕಡೆ ವೆಟ್ ಮಿಕ್ಸ್ ಹಾಕಿದ್ದು, ಡಾಂಬರೀಕರಣ ಮಾಡುವ ಕೆಲಸ ಬಾಕಿಯಿದೆ. ಬಣ್ಣ ಬಳಿಯುವ ಕೆಲಸವೂ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತುರ್ತು ಕಾಮಗಾರಿ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕಂಠೀರವ ಸ್ಟೇಡಿಯಂನಲ್ಲಿ ರಾಜಕಾಲುವೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲದ ವೇಳೆ ಕಂಠೀರವ ಸ್ಟೇಡಿಯಂ ಜಲಾವೃತವಾಗಲಿದ್ದು, ಕ್ರೀಡಾಪಟುಗಳಿಗೆ ಅನಾನುಕೂಲವಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ರಾಜಕಾಲುವೆಯ ತಡೆಗೋಡೆ ಎತ್ತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ  ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಅನಧಿಕೃತ ಕಟ್ಟಡಗಳನ್ನು ಗುರುತಿಸಿ, ಪಟ್ಟಿ ಮಾಡಬೇಕು. ಹಂತ-ಹಂತವಾಗಿ ತೆರವುಗೊಳಿಸುವ ಕಾರ್ಯವನ್ನು ಪ್ರಾರಭಿಸಬೇಕು. ಕಟ್ಟಡ ಕಟ್ಟುವ ಮುನ್ನವೇ ಯಾವುದೇ ರೀತಿಯ ಉಲ್ಲಂಘನೆ ಮಾಡದಂತೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಉತ್ತರ ನಗರ ಪಾಲಿಕೆಯಲ್ಲಿ ತೆರಿಗೆ ವಸೂಲಿ ಅಭಿಯಾನ

ಸುಸ್ತಿದಾರಿಂದ ಆಸ್ತಿ ತೆರಿಗೆದಾರ ಸಂಗ್ರಹಿಸುವ ಹಾಗೂ ತಪ್ಪಾಗಿ ಆಸ್ತಿ ವಿವರ ಘೋಷಣೆ ಮಾಡಿರುವರಿಗೆ ನೋಟಿಸ್ ಜಾರಿ ಮಾಡುವ ‘ತೆರಿಗೆ ಅಭಿಯಾನ’ವನ್ನು ಉತ್ತರ ನಗರ ಪಾಲಿಕೆಯಲ್ಲಿ ಆಯೋಜಿಸಲಾಗಿದೆ.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4,57,951 ಆಸ್ತಿಗಳಿದ್ದು, ಅವುಗಳಲ್ಲಿ ವಸತಿ–3,36,989, ವಸತಿಯೇತರ– 15,949, ವಸತಿ ಹಾಗೂ ವಸತಿಯೇತರ– 23,214 ಹಾಗೂ ಖಾಲಿ ನಿವೇಶನ– 81,799 ಇವೆ. ಒಟ್ಟು 1,697 ಆಸ್ತಿಗಳಿಗೆ ಕಂದಾಯ ಪರಿಷ್ಕರಣೆ ಅಗತ್ಯವಿದ್ದು, 78,565 ಆಸ್ತಿಗಳಿಂದ ಕೆಲವು ವರ್ಷಗಳಿಂದ ತೆರಿಗೆ ಬಾಕಿ ಉಳಿದಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.

2025–26ನೇ ಸಾಲಿನಲ್ಲಿ ಒಟ್ಟು ₹1,242 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸ ಲಾಗಿದೆ. ಈವರೆಗೆ ₹548 ಕೋಟಿ ತೆರಿಗೆ ಸಂಗ್ರಹವಾಗಿದೆ.

ಹೀಗಾಗಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ನೋಟಿಸ್ ಗಳನ್ನು ಜಾರಿ ಮಾಡಿ, ಬಾಕಿ ಮೊತ್ತ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.