ADVERTISEMENT

ಹೊಸಕೆರೆಗೆ ಒಳಚರಂಡಿ ನೀರು: ನಾಗರಿಕರ ಆತಂಕ

ತುಂಬಿದ ಹೂಳು: ಕುಗ್ಗಿದ ನೀರು ಸಂಗ್ರಹ ಸಾಮರ್ಥ್ಯ

ಪ್ರಜಾವಾಣಿ ವಿಶೇಷ
Published 25 ಮೇ 2023, 0:54 IST
Last Updated 25 ಮೇ 2023, 0:54 IST
ಕೆರೆಯಲ್ಲಿ ತುಂಬಿರುವ ಜೊಂಡು ಹಾಗೂ ತ್ಯಾಜ್ಯ ವಸ್ತುಗಳು
ಕೆರೆಯಲ್ಲಿ ತುಂಬಿರುವ ಜೊಂಡು ಹಾಗೂ ತ್ಯಾಜ್ಯ ವಸ್ತುಗಳು   

ರಂಗಸ್ವಾಮಿ ಕಣಿಯರ್‌

ಕೆಂಗೇರಿ: ಹಲವು ದಶಕಗಳ ಕಾಲ ಕೆಂಗೇರಿ ಸುತ್ತಮುತ್ತ ನಾಗರಿಕರಿಗೆ ಜೀವಜಲವಾಗಿದ್ದ ಹೊಸಕೆರೆಯು ಈಗ ಒಳಚರಂಡಿ ನೀರು, ಹೂಳು, ಜೊಂಡು ಹಾಗೂ ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಂಡಿದೆ. 

ಸುಮಾರು ಒಂದು ಕಿಲೋ ಮೀಟರಿಗೂ ಹೆಚ್ಚು ಉದ್ದನೆಯ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆಂಗೇರಿ ಹೊಸಕೆರೆ, ನಿರ್ವಹಣೆ ಕೊರತೆಯಿಂದ ಅವಸಾನದತ್ತ ತಲುಪಿದೆ. ಕೆರೆಯ ಒಡಲು ಹೂಳಿನಿಂದ ಆವೃತವಾಗಿದೆ. ಕೆರೆ ತುಂಬೆಲ್ಲಾ ಜೊಂಡು ಬೆಳೆದು ನಿಂತಿದೆ. ಸಂಗ್ರಹ ಸಾಮರ್ಥ್ಯ ಕುಂಠಿತಗೊಂಡು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ನೀರು ಕೂಡ ಪೋಲಾಗುತ್ತಿದೆ. ಇದರೊಂದಿಗೆ ಒಳಚರಂಡಿ ನೀರು ಸಹ ಕೆರೆಯ ಒಡಲು ಸೇರುತ್ತಿದೆ. ಕೆರೆಯ ನೀರಿನಲ್ಲಿ ನೊರೆ ಕಂಡು ಬರುತ್ತಿದ್ದು, ಇದು ಸುತ್ತಮುತ್ತ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. 

ADVERTISEMENT

ಕೆರೆ ಅಭಿವೃದ್ಧಿಗೆ ಈಗಾಗಲೇ ಎರಡು ಬಾರಿ ಅನುದಾನ ಬಿಡುಗಡೆಯಾಗಿದೆ. ಕೆಲ ವರ್ಷಗಳ ಹಿಂದೆ ₹ 3 ಕೋಟಿ ವೆಚ್ಚದಲ್ಲಿ ಕೆರೆಗೆ ಕಾಯಕಲ್ಪ ನೀಡಲಾಗಿತ್ತಾದರೂ ಯಾವುದೇ ಸುಧಾರಣೆಯಾಗಿರಲಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ₹ 8.8 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಿಧಾನಗತಿಯ ಕಾಮಗಾರಿಯಿಂದ ಕೆರೆ ಪುನಶ್ಚೇತನ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಆರೋಪ-ಪ್ರತ್ಯಾರೋಪ: ಕೆರೆಯಲ್ಲಿ ಕಂಡು ಬರುತ್ತಿರುವ ನೊರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್‌ ಗೀತಾ, ‘ಜಲಮಂಡಳಿ ನಿರ್ಲಕ್ಷ್ಯದಿಂದ ಕೊಳಚೆ ನೀರು ಕೆರೆಗೆ ಸೇರಿ, ಇಂತಹ ಅವಘಡಗಳು ಸಂಭವಿಸುತ್ತಿದೆ’ ಎಂದು ದೂರಿದರು.

ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ನವನೀತ್, ‘ಹೆಚ್ಚುವರಿ ಮಳೆಯಾದಾಗ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಒಳಚರಂಡಿ ನೀರಿನೊಂದಿಗೆ ಮೇಲ್ಚಾವಣಿ ನೀರು ಸೇರಿದರೆ ಮ್ಯಾನ್ ಹೋಲ್‌ಗಳು ಒಡೆದು, ಕೊಳಚೆ ನೀರು ಕೆರೆ ಕಟ್ಟೆಗಳಿಗೆ ಸೇರುತ್ತದೆ. ಮಳೆ ನೀರು ಸಂಗ್ರಹಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದರು.

ಕೊಳಚೆ ನೀರಿನಿಂದ ಕೆರೆ ಅಂಗಳದಲ್ಲಿ ಉತ್ಪತ್ತಿಯಾಗಿರುವ ನೊರೆ

20 ಅಡಿಗೆ ಕುಸಿದ ಆಳದ ಮಟ್ಟ

‘ಹೊಸಕೆರೆಯು ಸುಮಾರು 48 ಅಡಿ ಆಳ ಹೊಂದಿತ್ತು. ಈ ಮೂಲಕ ನಗರದಲ್ಲೇ ಅತ್ಯಂತ ಆಳವಾದ ಕೆರೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ದಿನ ಕಳೆದಂತೆ ಹೂಳು ತುಂಬಿ ಕೆರೆಯ ಆಳ ಕೇವಲ 20 ಅಡಿಗೆ ಕುಸಿದಿದೆ. ನೀರು ಸಂಗ್ರಹ ಸಾಮರ್ಥ್ಯವೂ ಕುಗ್ಗಿದೆ. ಸುತ್ತಮುತ್ತಲ ಪ್ರದೇಶದ ಅಂತರ್ಜಲ ಮಟ್ಟವೂ ಕ್ಷೀಣಿಸುತ್ತಿದೆ’ ಎಂದು ಸ್ಥಳೀಯ ಮೀನುಗಾರ ತಾತಾರಾವ್ ಬೇಸರ ವ್ಯಕ್ತಪಡಿಸಿದರು. ‘ಜಲಮಂಡಳಿ ನಿರ್ಲಕ್ಷ್ಯದಿಂದ ಕೆರೆಯ ಒಡಲು ಕಲುಷಿತಗೊಳ್ಳುತ್ತಿದೆ. ಅನುದಾನ ಬಿಡುಗಡೆಯಾದರೂ ವೇಗವಾಗಿ ಕಾಮಗಾರಿ ನಡೆಯುತ್ತಿಲ್ಲ. ಕೊಳಚೆ ನೀರು ಸೇರದಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕು’ ಎಂದು ಕೆರೆ ಭೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ಕದರಪ್ಪ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.