ADVERTISEMENT

ಆಸ್ಪತ್ರೆಯಲ್ಲಿ ನೀರಿಲ್ಲದೆ ಪರದಾಟ

ನೀರು ಸರಬರಾಜು ಟ್ಯಾಂಕರ್‌ ಲಾರಿ ಮಾಲೀಕರ ಮುಷ್ಕರ * ಹೊಸಪೇಟೆಯಿಂದ ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:42 IST
Last Updated 17 ಮಾರ್ಚ್ 2020, 21:42 IST
ಆಸ್ಪತ್ರೆಯಲ್ಲಿ ಕಾಲರಾ ರೋಗಿಗಳು ಇರುವ ವಾರ್ಡ್‌ನ ನೋಟ
ಆಸ್ಪತ್ರೆಯಲ್ಲಿ ಕಾಲರಾ ರೋಗಿಗಳು ಇರುವ ವಾರ್ಡ್‌ನ ನೋಟ   

ವೈಟ್‌ಫೀಲ್ಡ್‌ : ಟ್ಯಾಂಕರ್‌ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆ ಸೇರಿದಂತೆ ಸುತ್ತ–ಮುತ್ತಲಿನ ಕಂಪನಿಗಳಲ್ಲಿ ಮಂಗಳವಾರ ನೀರಿನ ಸಮಸ್ಯೆ ಎದುರಾಯಿತು. ವೈದ್ಯರು, ರೋಗಿಗಳು ಮತ್ತು ಉದ್ಯೋಗಿಗಳು ಕೈ ತೊಳೆಯಲೂ ನೀರಿಲ್ಲದೆ ಪರದಾಡಬೇಕಾಯಿತು.

ಹೊಸಕೋಟೆಯ ಮೂರು ಗ್ರಾಮಗಳಿಂದ ಮಹದೇವಪುರ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ, ಇಲ್ಲಿನ ಕೊಳವೆಬಾವಿಗಳಿಂದ ನೀರು ಸಾಗಿಸಲು ತಹಶೀಲ್ದಾರ್‌ ನಿರ್ಬಂಧ ವಿಧಿಸಿ ಆದೇಶ ನೀಡಿದ್ದರಿಂದ, ಟ್ಯಾಂಕರ್‌ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ.

‘1,600 ಹಾಸಿಗೆ ವ್ಯವಸ್ಥೆಯುಳ್ಳ ವೈದೇಹಿ ಆಸ್ಪತ್ರೆಯಲ್ಲಿ ನಿತ್ಯ ಮೂರು ಸಾವಿರಕ್ಕೂ ಹೆಚ್ಚು ಹೊರರೋಗಿಗಳು ಹಾಗೂ ಸಾವಿರಕ್ಕೂ ಹೆಚ್ಚು ಒಳರೋಗಿಗಳು ಇದ್ದಾರೆ. ಈಗ, ನೀರಿಲ್ಲದೆ ತುಂಬಾ ಸಮಸ್ಯೆಯಾಗಿದೆ. ಆಸ್ಪತ್ರೆಗೆ ದಿನಕ್ಕೆ 10 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ’ ಎಂದು ವೈದೇಹಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ರವಿ ಹೇಳಿದರು.

ADVERTISEMENT

‘ಕೊರೊನಾ ಸೋಂಕು ಹಾಗೂ ಕಾಲರಾದಂತಹ ಮಾರಕ ರೋಗಗಳು ಹರಡುತ್ತಿರುವ ಪರಿಸ್ಥಿಯಲ್ಲಿ ರೋಗವನ್ನು ಖಚಿತಪಡಿಸಿಕೊಳ್ಳಲು ನಿತ್ಯ ಆಸ್ಪತ್ರೆಗೆ ನೂರಾರು ಮಂದಿ ಬಂದು ದಾಖಲಾಗುತ್ತಿದ್ದಾರೆ. ಕಾಲರಾ ವಾರ್ಡ್‌ನಲ್ಲಿ ರೋಗಿಗಳು ವಾಂತಿ, ಭೇದಿ ಮಾಡಿದಾಗ ತೊಳೆಯಲು ನೀರಿಲ್ಲದೆ ಪರದಾಡುವಂತಾಗಿದೆ’ ಎಂದು ಅವರು ಹೇಳಿದರು.

‘ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ, ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.