ADVERTISEMENT

ಬೆಂಗಳೂರು | ಕೆಪಿಎಂಇ ಕಾಯ್ದೆ: ಆಸ್ಪತ್ರೆಗಳಿಗೆ ₹ 7.35 ಲಕ್ಷ ದಂಡ

ಎರಡು ಚಿಕಿತ್ಸಾಲಯಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 23:30 IST
Last Updated 5 ಮಾರ್ಚ್ 2025, 23:30 IST
   

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಘನೆ ಕಾರಣ ಆಸ್ಪತ್ರೆಗಳು ಸೇರಿ 16 ಸಂಸ್ಥೆಗಳಿಗೆ ₹ 7.35 ಲಕ್ಷ ದಂಡ ಹಾಗೂ ಎರಡು ಚಿಕಿತ್ಸಾಲಯಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 

ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಆದೇಶಿಸಲಾಗಿದೆ. ಬುಧವಾರ ನಡೆದ ಸಭೆಯಲ್ಲಿ ಕೆಪಿಎಂಇ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 39 ಪ್ರಕರಣಗಳ ಬಗ್ಗೆ ವಿವರ ಸಲ್ಲಿಸಿದ್ದರು. ಇವುಗಳಲ್ಲಿ ಯಲಹಂಕದ ಅಟ್ಟೂರು ಲೇಔಟ್‌ನ ರಾಯ್‌ ಪೈಲ್ಸ್ ಕ್ಲಿನಿಕ್ ಹಾಗೂ ಕೆ.ಆರ್. ಪುರದ ದೇವಸಂದ್ರದ ವೆಂಕಟೇಶ್ವರ ಚಿತ್ರಮಂದಿರ ರಸ್ತೆ ಬಳಿಯಿರುವ ಕಾಮಧೇನು ಪಂಚಗವ್ಯ ಚಿಕಿತ್ಸಾಲಯದ ವಿರುದ್ಧ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

ಚರ್ಮ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಒದಗಿಸುತ್ತಿದ್ದ ‘ಸ್ಕಿನ್ ಡಿಸೈರ್ಸ್ ಡರ್ಮಾಕೊ’ ಕೇಂದ್ರವನ್ನು ಮುಚ್ಚಲು ಸೂಚಿಸಿದ್ದಾರೆ. ಒಂದು ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ವರ್ಗಾಯಿಸಲಾಗಿದೆ. ಮೂರು ಸಂಸ್ಥೆಗಳ ಪ್ರತಿನಿಧಿಗಳು ಸಭೆಗೆ ಗೈರಾಗಿದ್ದರು. 15 ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿದ್ದಾರೆ. 

ADVERTISEMENT

ದಂಡ ವಿಧಿಸಲ್ಪಟ್ಟ ಸಂಸ್ಥೆಗಳು: ಅಂದ್ರಹಳ್ಳಿಯ ತಿಗಳರಪಾಳ್ಯದ ‘ಲಕ್ಷ್ಮೀ ಪಾಲಿ ಕ್ಲಿನಿಕ್‌’, ಮಾಚೋಹಳ್ಳಿ ಗೇಟ್‌ ಬಳಿಯಿರುವ ಪಾನ ಮತ್ತು ಮಾದಕ ಚಟ ಬಿಡಿಸುವ ‘ನವಜೀವನ ಟ್ರಸ್ಟ್’ ಹಾಗೂ ‘ನವೋದಯ ಮದ್ಯಪಾನ ಮತ್ತು ಮಾದಕ ಚಟ ಬಿಡಿಸುವ ಕೇಂದ್ರ’ಕ್ಕೆ ತಲಾ ₹ 1 ಲಕ್ಷ ದಂಡ ವಿಧಿಸಲಾಗಿದೆ. 

ಸುಂಕದಕಟ್ಟೆಯಲ್ಲಿರುವ ಕೀರ್ತನ ಫೌಂಡೇಷನ್‌, ಗಿಡದಕೊನೇನಹಳ್ಳಿಯ 8ನೇ ಬ್ಲಾಕ್‌ನಲ್ಲಿರುವ ಅನನ್ಯಾ ಆಸ್ಪತ್ರೆ, ನೆಲಗದರಹಳ್ಳಿಯ 1ನೇ ಮುಖ್ಯರಸ್ತೆಯಲ್ಲಿರುವ ಸಮೃದ್ಧಿ ಡಯಾಗ್ನಾಸ್ಟಿಕ್, ವೈಯಾಲಿಕಾವಲ್‌ನಲ್ಲಿರುವ ಮೆಡಲ್ ಡಯಾಗ್ನಾಸ್ಟಿಕ್ ಹಾಗೂ ಮಾಚೋಹಳ್ಳಿ ಗೇಟ್‌ ಬಳಿ ಇರುವ ಸಂತೃಪ್ತಿ ಫೌಂಡೇಷನ್‌ಗೆ ತಲಾ ₹ 50 ಸಾವಿರ ದಂಡ ಹಾಕಲಾಗಿದೆ. 

ಎಚ್‌ಬಿಆರ್ ಬಡಾವಣೆಯ ಕೊಸ್ಮೆಡಿಕ್ಸ್ ಕ್ಲಿನಿಕ್, ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿರುವ ಲೋಟಸ್ ಆಸ್ಪತ್ರೆ, ಉತ್ತರಹಳ್ಳಿಯ ಸಾನಿಯಾ ಪೈಲ್ಸ್ ಕ್ಲಿನಿಕ್, ಕಾಮಾಕ್ಷಿಪಾಳ್ಯದ ಪೈಲ್ಸ್ ಮತ್ತು ಫಿಸ್ತುಲಾ ಕ್ಲಿನಿಕ್, ಹೊಂಗಸಂದ್ರದ ಸೇವಾ ಹೆಲ್ತ್ ಕೇರ್, ಎಚ್ಎಸ್‌ಆರ್ ಬಡಾವಣೆಯಲ್ಲಿರುವ ವಾಸನ್ ಐ ಕೇರ್ ಹಾಗೂ ಯಲಹಂಕದಲ್ಲಿ ರಾಜಶೇಖರ್ ಎಂಬುವರು ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್ ಮತ್ತು ಫಿಸಿಯೋಥೆರಪಿ ಕೇಂದ್ರಕ್ಕೆ ತಲಾ ₹ 25 ಸಾವಿರ ದಂಡ ವಿಧಿಸಲಾಗಿದೆ. 

ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಚಲುವನಾರಾಯಣಸ್ವಾಮಿ ಪಾಲಿ ಕ್ಲಿನಿಕ್ ಆ್ಯಂಡ್ ಮೆಡಿಕಲ್‌ಗೆ ₹ 10 ಸಾವಿರ ದಂಡ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.