ADVERTISEMENT

ಹಾಸಿಗೆ ಲಭ್ಯತೆ: ಸುತ್ತೋಲೆ ಮಾರ್ಪಡಿಸಲು ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 21:34 IST
Last Updated 16 ಜುಲೈ 2020, 21:34 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗಾಗಿ ಹಾಸಿಗೆ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಜು.15ರಂದು ಹೊರಡಿಸಿರುವ ಸುತ್ತೋಲೆಯನ್ನು ಮಾರ್ಪಡಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಜೂನ್‌ 19ರಂದು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶ ಪಾಲಿಸಬೇಕು’ ಎಂದು ನಿರ್ದೇಶನ ನೀಡಿದೆ.

ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು. ‘ಹಾಸಿಗೆ ಲಭ್ಯತೆ ಬಗ್ಗೆ ಫಲಕ ಅಳವಡಿಸಬೇಕು. ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಇ–ಮೇಲ್ ಮತ್ತು ವಾಟ್ಸ್‌ ಆ್ಯಪ್ (9480812450) ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ADVERTISEMENT

‘ಹಾಸಿಗೆ ಲಭ್ಯವಿಲ್ಲ ಎಂಬುದರ ಬಗ್ಗೆ ಹೆಚ್ಚಿನ ದೂರುಗಳು ದಾಖಲಾಗುತ್ತಿವೆ. ಹೀಗಾಗಿ, ನಿಗದಿತ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗದಿದ್ದರೆ ಅಹವಾಲು ಸಲ್ಲಿಸಲು ನಿರ್ದಿಷ್ಟ ದೂರವಾಣಿ ಸಂಖ್ಯೆ ನೀಡಬೇಕು. ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಪ್ರಕಾರ ದಂಡ ಸಹಿತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಬೇಕು’ ಎಂದು ಪೀಠ ಹೇಳಿತು.

ಪೌರ ಕಾರ್ಮಿಕರಿಗೆ ಪಿಪಿಇ ಕಿಟ್: ‘ಕಂಟೈನ್‌ಮೆಂಟ್ ವಲಯದಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೂ ವಿಶೇಷ ಪಿಪಿಇ ಕಿಟ್ ನೀಡಬೇಕು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.