ADVERTISEMENT

ಬಿಸಿ ಡಾಂಬರು ಮಿಶ್ರಣ ಘಟಕ ನಿರ್ವಹಣೆಗೆ ಮರು ಟೆಂಡರ್‌

ಟೆಂಡರ್‌ ಅಕ್ರಮಗಳು ಟಿವಿಸಿಸಿ ತನಿಖೆಯಲ್ಲಿ ಸಾಬೀತು * ಪ್ರಜಾವಾಣಿ ವರದಿಯಿಂದ ಬಯಲಿಗೆ ಬಂದಿದ್ದ ಹಗರಣ

ಪ್ರವೀಣ ಕುಮಾರ್ ಪಿ.ವಿ.
Published 1 ಜೂನ್ 2021, 21:20 IST
Last Updated 1 ಜೂನ್ 2021, 21:20 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯು ಕಣ್ಣೂರಿನಲ್ಲಿ ಸ್ಥಾಪಿಸಿರುವ ಜಲ್ಲಿ– ಬಿಸಿ ಡಾಂಬರು ಮಿಶ್ರಣ (ಹಾಟ್‌ ಮಿಕ್ಸ್‌) ಘಟಕದ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಬಿಬಿಎಂಪಿ ಆಯುಕ್ತರ ತಾಂತ್ರಿಕ ಮತ್ತು ಜಾಗೃತ ಕೋಶ (ಟಿವಿಸಿಸಿ) ತನಿಖೆಯಲ್ಲಿ ಸಾಬೀತಾಗಿದೆ. ಹಾಗಾಗಿ ಈ ಘಟಕದ ನಿರ್ವಹಣೆಯ ಈಗಿನ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯಲು ಬಿಬಿಎಂಪಿ ನಿರ್ಧರಿಸಿದೆ.

ಈ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ ಮೇ 27 ಹಾಗೂ 28ರ ಸಂಚಿಕೆಗಳಲ್ಲಿ ವಿಶೇಷ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಟೆಂಡರ್‌ ಪ್ರಕ್ರಿಯೆಯನ್ನು ಪರಿಶೀಲನೆಗೆ ಒಳಪಡಿಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಟಿವಿಸಿಸಿಗೆ ಸೂಚನೆ ನೀಡಿದ್ದರು. ಟಿವಿಸಿಸಿಯ ಕಾರ್ಯಪಾಲಕ ಎಂಜಿನಿಯರ್‌ ಅವರು ಮುಖ್ಯ ಆಯುಕ್ತರಿಗೆ ಸೋಮವಾರ ವರದಿ ನೀಡಿದ್ದಾರೆ.

‘ಟೆಂಡರ್‌ ಪ್ರಕಿಯೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮರುಟೆಂಡರ್‌ ಮಾಡುವ ಅವಶ್ಯಕತೆ ಇದೆ. ಹಾಗಾಗಿ, ಈ ಘಟಕದ ನಿರ್ವಹಣೆಗೆ ಮರು ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಘಟಕದ ನಿರ್ವಹಣೆಗೆ ಮತ್ತು ಬಿಬಿಎಂಪಿಯ ಸಂಪನ್ಮೂಲ ಬಳಸಿ ಬಿಸಿ ಡಾಂಬರು ಮಿಶ್ರಣ ತಯಾರಿಸುವ ಸಲುವಾಗಿ ಪಾಲಿಕೆ 2021ರ ಮಾರ್ಚ್‌ 20ರಂದು ಟೆಂಡರ್ ಕರೆದಿತ್ತು. ಐವರು ಗುತ್ತಿಗೆದಾರರು ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ನಾಲ್ಕು ಪ್ರಮುಖ ಮಾನದಂಡಗಳ ಆಧಾರದಲ್ಲಿ ಗುತ್ತಿಗೆದಾರರ ತಾಂತ್ರಿಕ ಅರ್ಹತೆಯ ಪರಿಶೀಲನೆ ನಡೆಸಲಾಗಿತ್ತು.

ವೃತ್ತಿಪರ ಸಿಬ್ಬಂದಿಯ ಅರ್ಹತೆ ಹಾಗೂ ದಕ್ಷತೆಗೆ 15 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಗುತ್ತಿಗೆದಾರ ಬಿ.ಎಸ್‌.ಧನಂಜಯ ಅವರಿಗೆ ಪೂರ್ತಿ 15 ಅಂಕಗಳನ್ನು ಹಾಗೂ ಜೆಎಂಸಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗೆ 7 ಅಂಕ ನೀಡಲಾಗಿದೆ. ಉಳಿದ ಮೂವರು ಗುತ್ತಿಗೆದಾರರಿಗೆ ಸೊನ್ನೆ ಅಂಕ ನೀಡಲಾಗಿದೆ. ಇಲ್ಲಿ ಜೆಎಂಸಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ಎಲ್ಲ ಅರ್ಹತೆ ಪೂರೈಸಿದ್ದರೂ ಕೇವಲ 7 ಅಂಕ ನೀಡಿದ್ದು ಸಮಂಜಸ ಅಲ್ಲ ಎಂದು ಟಿವಿಸಿಸಿ ಅಭಿಪ್ರಾಯ‍ಪಟ್ಟಿದೆ.

ಯಂತ್ರೋಪಕರಣ ಸೌಲಭ್ಯಗಳ ಲಭ್ಯತೆ ಹಾಗೂ ಜ್ಞಾನ ಹಸ್ತಾಂತರಕ್ಕೆ ಸಂಬಂಧಿಸಿದ ಷರತ್ತಿಗೆ ತಲಾ 10 ಅಂಕ ನಿಗದಿಪಡಿಸಲಾಗಿತ್ತು. ಇದರ ಪ್ರಕಾರ ಗುತ್ತಿಗೆದಾರರು ನಿರ್ದಿಷ್ಟ ಸಂಖ್ಯೆ ಟಿಪ್ಪರ್‌, ಜೆಸಿಬಿಗಳನ್ನು ಹಾಗೂ ಸ್ವಂತ ಮಿಲ್ಲಿಂಗ್‌ ಯಂತ್ರವನ್ನು ಹೊಂದಿರಬೇಕಿತ್ತು. ಧನಂಜಯ ಅವರು ಸ್ವಂತ ಮಿಲ್ಲಿಂಗ್‌ ಯಂತ್ರ ಹೊಂದಿಲ್ಲದೇ ಇದ್ದರೂ ಅವರಿಗೆ 10ರಲ್ಲಿ 10 ಅಂಕ ನೀಡಿದ್ದು ಸರಿಯಲ್ಲ. ಉಳಿದ ಮೂವರು ಗುತ್ತಿಗೆದಾರರು ನಿಗದಿತ ಸಂಖ್ಯೆಯ ಟಿಪ್ಪರ್‌, ಜೆಸಿಬಿ ಹಾಗೂ ಮಿಲ್ಲಿಂಗ್‌ ಯಂತ್ರ ಹೊಂದಿದ್ದರೂ ಅವರಿಗೆ 10ರಲ್ಲಿ 8 ಅಂಕ ಮಾತ್ರ ನೀಡಿರುವುದು ಸಮಂಜಸವಲ್ಲ ಎಂದು ಟಿವಿಸಿಸಿ ಹೇಳಿದೆ.

ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ನ ಮೋಹನ್‌ ನರಸಿಂಹಲು ಅವರು ತಾಂತ್ರಿಕ ಮೌಲ್ಯಮಾಪನದ ಎಲ್ಲ ಷರತ್ತುಗಳನ್ನು ಪೂರೈಸಿದ್ದರು. ಆದರೂ, ‘ಬಿಬಿಎಂಪಿಯ ಟೆಂಡರ್‌ಗಳ ಹಿಂದಿನ ಬಿಡ್ಡಿಂಗ್‌ ದಾಖಲೆಗಳ ಪ್ರಕಾರ ಪೂರ್ವ ವಲಯದಲ್ಲಿ 2019–20ರಲ್ಲಿ ಅತಿ ದಟ್ಟಣೆ ಕಾರಿಡಾರ್‌ ಅಭಿವೃದ್ಧಿ ಕಾಮಗಾರಿಗಳಲ್ಲಿ ಸ್ಪರ್ಧಾತ್ಮಕವಲ್ಲದ ದರವನ್ನು ನಮೂದಿಸಿದ್ದರು. ಅವರು ಗುತ್ತಿಗೆ ಪಡೆದಿರುವ ಬಳ್ಳಾರಿ ರಸ್ತೆ ಹಾಗೂ ಜಯಮಹಲ್‌ ರಸ್ತೆ ವಿಸ್ತರಣೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅತಿ ದಟ್ಟಣೆ ಕಾರಿಡಾರ್‌ ಕಾಮಗಾರಿ ತೆವಳುತ್ತಾ ಸಾಗುತ್ತಿದೆ. ರಸ್ತೆ ನಿರ್ವಹಣೆ ಕಾಮಗಾರಿಯನ್ನು ನಿತ್ಯವೂ ಕೈಗೊಳ್ಳಬೇಕಾಗುತ್ತದೆ. ಈ ಕಾಮಗಾರಿಗಳನ್ನು ಎಚ್ಚರಿಕೆಯಿಂದ ಹಾಗೂ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಹಾಗಾಗಿ ಜೆಎಂಸಿಯ ತಾಂತ್ರಿಕ ಬಿಡ್‌ ಪರಿಗಣಿಸುವುದು ಸಮಂಜಸವಲ್ಲ’ ಎಂಬ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಈ ರೀತಿ ತಾಂತ್ರಿಕ ಬಿಡ್‌ ಅನ್ನು ಅನರ್ಹಗೊಳಿಸಿದ್ದು ಸರಿಯಲ್ಲ ಎಂದು ಟಿವಿಸಿಸಿ ಅಭಿಪ್ರಾಯಪಟ್ಟಿದೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಯಲ್ಲಿ ಉಲ್ಲೇಖಿಸಿರುವಂತೆ, ಧನಂಜಯ ಅವರು ಸಲ್ಲಿಸಿರುವ ವಾರ್ಷಿಕ ವಹಿವಾಟಿನ ದಾಖಲೆಗಳು ಸುಳ್ಳಿನಿಂದ ಕೂಡಿರುವ ಬಗ್ಗೆ ಹಾಗೂ ಅವರು ಫಾರ್ಚೂನರ್‌ ವಾಹನದ ದಾಖಲೆಗಳನ್ನು ಟಿಪ್ಪರ್‌ನ ದಾಖಲೆ ಎಂಬಂತೆ ಬಿಂಬಿಸಿ ಸಲ್ಲಿಸಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಮಾಹಿತಿ ಪಡೆಯಬಹುದು ಎಂದು ಟಿವಿಸಿಸಿ ಹೇಳಿದೆ.

ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡಿರುವುದರಿಂದ ಧನಂಜಯ ಅತಿ ಹೆಚ್ಚು ಅಂಕ (87) ಗಳಿಸಲು ಸಾಧ್ಯವಾಗಿದೆ. ಮೊದಲ ಸ್ಥಾನ ಪಡೆಯುವ ಅರ್ಹತೆ ಇದ್ದರೂ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ 77 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನಕ್ಕ ಸೀಮಿತವಾಗಿದ್ದು ತನಿಖೆಯಲ್ಲಿ ಸಾಬೀತಾಗಿದೆ.

ಟಿವಿಸಿಸಿ ವರದಿಯ ಪ್ರಮುಖ ಸಾರ

*ಅಂಕ ನೀಡುವಿಕೆಯಲ್ಲಿ ತಾರತಮ್ಯ ಮೇಲ್ನೋಟಕ್ಕೆ ಸಾಬೀತು

*ನಿಗದಿಪಡಿಸಿದಷ್ಟು ಯಂತ್ರೋಪಕರಣ ಇಲ್ಲದಿದ್ದರೂ ಗುತ್ತಿಗೆದಾರ ಧನಂಜಯ ಅವರಿಗೆ ಪೂರ್ಣ ಅಂಕ ನೀಡಿದ್ದು ಸರಿಯಲ್ಲ

*ಕಾರಣವಿಲ್ಲದೇ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯನ್ನು ತಾಂತ್ರಿಕವಾಗಿ ಅನರ್ಹ ಎಂದು ಪರಿಗಣಿಸಿದ್ದೂ ಅಸಮಂಜಸ

*ಸುಳ್ಳು ದಾಖಲೆ ಸಲ್ಲಿಸಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಹೆಚ್ಚಿನ ಮಾಹಿತಿ ತರಿಸುವಂತೆ ಟಿವಿಸಿಸಿ ಶಿಫಾರಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.