ADVERTISEMENT

ಮತ್ತೊಮ್ಮೆ ಕಷ್ಟಕ್ಕೆ ಹೋಟೆಲ್ ಉದ್ಯಮ

ಕಾರ್ಮಿಕರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾಲೀಕರು

ವಿಜಯಕುಮಾರ್ ಎಸ್.ಕೆ.
Published 20 ಮೇ 2021, 19:37 IST
Last Updated 20 ಮೇ 2021, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಮೊದಲ ಅಲೆಯ ಹೊಡೆತಕ್ಕೇ ತತ್ತರಿಸಿದ್ದ ಹೋಟೆಲ್ ಉದ್ಯಮ ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಪಾರ್ಸೆಲ್‌ ಸೇವೆಗೆ ಅವಕಾಶ ದೊರೆತಿದ್ದರೂ, ಕಾರ್ಮಿಕರಿಗೆ ಸಂಬಳ ಕೊಡಲೂ ಸಾಧ್ಯವಾಗದ ಸ್ಥಿತಿಗೆ ಉದ್ಯಮ ತಲುಪಿದೆ.

ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಸೊರಗಿದ್ದ ಆತಿಥ್ಯ ಉದ್ಯಮ, ಹಲವು ಸವಾಲುಗಳ ನಡುವೆ ಚೇತರಿಕೆ ಹಾದಿಯಲ್ಲಿತ್ತು. ಆದರೂ, ಶೇ 30ರಷ್ಟು ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಿಕೊಂಡವು. ‌ತಿಂಗಳಿಗೆ ₹600 ಕೋಟಿ ವಹಿವಾಟು ನಡೆಸುತ್ತಿದ್ದ ಈ ಉದ್ಯಮ ಈಗ ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲಾಗದ ಹಂತಕ್ಕೆ ಬಂದು ನಿಂತಿದೆ.

ಆತಿಥ್ಯದಲ್ಲಿ ದೇಶದಲ್ಲೇ ಬೆಂಗಳೂರು ಹೆಸರುವಾಸಿ. ಈ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ. ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಪಾರ್ಸೆಲ್ ನೀಡಲು ಊಟ–ಉಪಾಹಾರ ಸಿದ್ಧಪಡಿಸಿ ಇಟ್ಟುಕೊಂಡರೂ ಜನ ಬರುತ್ತಿಲ್ಲ. ಕೋವಿಡ್ ಭಯದಲ್ಲಿ ಮನೆಯಿಂದ ಹೊರಗೆ ಬರಲು ಜನರು ಭಯಪಡುತ್ತಿದ್ದಾರೆ. ಸಿದ್ಧಪಡಿಸಿದ ಆಹಾರದಲ್ಲಿ ದಿನವೂ ಸಾಕಷ್ಟು
ಉಳಿಯುತ್ತಿದೆ.

ADVERTISEMENT

‘ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವಾಗ ಹೋಟೆಲ್ ಉದ್ಯಮವನ್ನು ಪರಿಗಣಿಸಿಯೇ ಇಲ್ಲ. ಕಟ್ಟಡದ ಬಾಡಿಗೆ, ವಿದ್ಯುತ್ ಶುಲ್ಕ, ತೆರಿಗೆ ವಿನಾಯಿತಿ ಕೋರಿದ್ದರೂ ಸ್ಪಂದಿಸಿಲ್ಲ. ಕಟ್ಟಡದ ಮಾಲೀಕರು ಬಾಡಿಗೆಯಲ್ಲಿ ವಿನಾಯಿತಿ ನೀಡುವುದಿಲ್ಲ. ಉದ್ಯಮ ಉಳಿಸಿಕೊಳ್ಳಲು ಆಗದ ಸ್ಥಿತಿಗೆ ಮಾಲೀಕರು ಬಂದಿದ್ದಾರೆ’ ಎಂದು ಕರ್ನಾಟಕ ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದರು.

‘ಹೋಟೆಲ್ ಬಂದ್ ಮಾಡಿದರೂ ಕನಿಷ್ಠ ವಿದ್ಯುತ್ ಶುಲ್ಕ ಪಾವತಿಸಲೇಬೇಕು. ಪರಿವಾನಗಿ ನವೀಕರಣ ಶುಲ್ಕ ಪಾವತಿಸಬೇಕು. ವಿದ್ಯುತ್ ಶುಲ್ಕ ಮತ್ತು ನವೀಕರಣ ಶುಲ್ಕ ಮನ್ನಾ ಮಾಡಬೇಕು ಎಂದು ಕೋರಿದ್ದೆವು. ಸರ್ಕಾರ ಪ್ಯಾಕೇಜ್‌ ಘೋಷಣೆ ಮಾಡುವಾಗ ಈ ಉದ್ಯಮವನ್ನು ಮರೆತಿದೆ’ ಎಂದರು.

‘ಲಾಡ್ಜಿಂಗ್ ಹೊಂದಿರುವ ಹೋಟೆಲ್‌ಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಜನರಿಲ್ಲದೆ ಎಲ್ಲವೂ ಖಾಲಿ ಹೊಡೆಯುತ್ತಿವೆ. ಆದರೂ ಆಸ್ತಿ ತೆರಿಗೆ ಪಾವತಿಸಲೇಬೇಕು. ಸರ್ಕಾರ ನಮ್ಮ ನೋವನ್ನು ಪರಿಗಣಿಸುತ್ತಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಸಿಲ್ಲದೆ ಕಾರ್ಮಿಕರ ಪಡಿಪಾಟಲು

ಲಾಕ್‌ಡೌನ್ ಘೋಷಣೆಯಾದ ನಂತರ ಕೆಲ ಕಾರ್ಮಿಕರು ಬೆಂಗಳೂರು ಖಾಲಿ ಮಾಡಿದ್ದರೆ, ಇನ್ನೂ ಅನೇಕರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ, ಅವರಿಗೆ ಕೆಲಸವೂ ಇಲ್ಲ, ಸಂಬಳವೂ ಇಲ್ಲದೆ ಬರಿಗೈ ಆಗಿದ್ದಾರೆ. ಹೋಟೆಲ್‌ಗೆ ಬಂದ ಜನರ ಹಸಿವು ನೀಗಿಸುತ್ತಿದ್ದ ಸಿಬ್ಬಂದಿಗೆ ಈಗ ಹೊಟ್ಟೆಪಾಡಿನ ಯೋಚನೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ತಾರಾ ಹೋಟೆಲ್‌ಗಳು, ಸಾಮಾನ್ಯ ಹೋಟೆಲ್‌ಗಳು, ದರ್ಶಿನಿಗಳು, ಗಂಡ–ಹೆಂಡತಿ ಸೇರಿ ನಡೆಸುವ ಅತಿ ಸಣ್ಣ ಹೋಟೆಲ್‌ಗಳು ಇವೆ. ತಾರಾ ಹೋಟೆಲ್‌ಗಳು ಮತ್ತು ಸಾಮಾನ್ಯ ಹೋಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತದವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಚೈನೀಸ್ ಮತ್ತು ಉತ್ತರ ಭಾರತ ಶೈಲಿಯ ಆಹಾರ ತಯಾರಿಸಲಷ್ಟೇ ಗೊತ್ತು. ಈಗ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಈ ರೀತಿಯ ಆಹಾರವನ್ನು ಜನ ಕೇಳುತ್ತಿಲ್ಲ. ಹೀಗಾಗಿ, ಉತ್ತರ ಭಾರತ ಕಾರ್ಮಿಕರಿಗೆ ಕೆಲಸವೇ ಇಲ್ಲದಾಗಿದೆ ಎಂದು ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

‘ಎಲ್ಲ ಹೋಟೆಲ್‌ಗಳಲ್ಲೂ ಸಿಬ್ಬಂದಿಗೆ ಪಿ.ಎಫ್‌ ಮತ್ತು ಇಎಸ್‌ಐ ನೀಡಲಾಗುತ್ತಿದೆ. ಅವರ ಸಂಖ್ಯೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇದೆ. ಯಾವುದೇ ಗೊಂದಲ ಇಲ್ಲದೆ ಅವರ ಖಾತೆಗಳಿಗೆ ಪರಿಹಾರ ತಲುಪಿಸಬಹುದು. ಹೋಟೆಲ್‌ ಕಾರ್ಮಿಕರನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾಕಷ್ಟು ಮಂದಿ ಊರಿಗೆ ಹೋಗಿದ್ದಾರೆ. ಊರಿಗೆ ಹೋದರೂ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಆ ಕಾರಣಕ್ಕೆ ಬೆಂಗಳೂರಿನಲ್ಲೇ ಇದ್ದೇವೆ. ಸಂಬಳ ಇಲ್ಲದೆ ಇಲ್ಲಿ ಕೂಡ ಅದೆಷ್ಟು ದಿನ ಇರಲು ಸಾಧ್ಯ’ ಎಂದು ಹೋಟೆಲ್ ಉದ್ಯೋಗಿ ರಮೇಶ್ ಪ್ರಶ್ನಿಸಿದರು.

ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ

‘ಸರ್ಕಾರ ಹೋಟೆಲ್ ಉದ್ಯಮಿಗಳು ಮತ್ತು ಅಲ್ಲಿನ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೆ ಹೋಟೆಲ್‌ಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

ಉದ್ಯಮದ ಸಮಸ್ಯೆಯನ್ನು ಈ ಹಿಂದೆಯೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಆದರೂ, ಯಾವುದೇ ಉಪಯೋಗವನ್ನೂ ಸರ್ಕಾರ ಮಾಡಿಲ್ಲ ಎಂದರು.

ಅಂಕಿ–ಅಂಶ

24,500 - ನಗರದಲ್ಲಿರುವ ಒಟ್ಟು ಹೋಟೆಲ್‌ಗಳು

21,000 - ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಹೋಟೆಲ್‌ಗಳು

3,500 - ನಗರದಲ್ಲಿರುವ ತಾರಾ (ಸ್ಟಾರ್) ಹೋಟೆಲ್‌ಗಳು

1.40 ಲಕ್ಷ - ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು

₹ 600 ಕೋಟಿ - ಆತಿಥ್ಯ ವಲಯ ನಡೆಸುವ ಒಂದು ತಿಂಗಳ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.