ADVERTISEMENT

ಹೋಟೆಲ್ ಬೆಲೆ ಏರಿಕೆ: ಸರ್ಕಾರಗಳಿಗೆ ಹಿಡಿಶಾಪ

ಅಗತ್ಯ ವಸ್ತುಗಳ ಬೆಲೆ ಇಳಿಸುವ ಮೂಲಕ ತಿಂಡಿ–ತಿನಿಸುಗಳ ದರ ತಗ್ಗಿಸಲು ಆಗ್ರಹ

ವರುಣ ಹೆಗಡೆ
Published 27 ಜುಲೈ 2023, 0:21 IST
Last Updated 27 ಜುಲೈ 2023, 0:21 IST
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಗ್ರಾಹಕರು ಊಟ ಸವಿಯುತ್ತಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಗ್ರಾಹಕರು ಊಟ ಸವಿಯುತ್ತಿರುವುದು –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.    

ಬೆಂಗಳೂರು: ‘ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವು, ಹೋಟೆಲ್‌ ತಿಂಡಿ–ತಿನಿಸುಗಳನ್ನೇ ಅವಲಂಬಿಸಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣ ನೀಡಿ ಹೋಟೆಲ್‌ಗಳೂ ದರ ಏರಿಸುತ್ತಿವೆ. ಆದರೆ, ನಮ್ಮ ವೇತನದಲ್ಲಿ ಮಾತ್ರ ಅಂತಹ ವ್ಯತ್ಯಾಸವಾಗಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.’

ಇವು ಬಸವನಗುಡಿಯ ಎಸ್‌.ಎಲ್‌.ವಿ. ಹೋಟೆಲ್‌ಗೆ ಬಂದಿದ್ದ ಗ್ರಾಹಕರ ಬೇಸರದ ಮಾತುಗಳು. ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘವು ಹೋಟೆಲ್‌ಗಳ ತಿಂಡಿ–ತಿನಿಸುಗಳ ಬೆಲೆಯನ್ನು ಶೇ 10ರಷ್ಟು ಹೆಚ್ಚಿಸಲು ನಿರ್ಧಾರ ಕೈಗೊಂಡಿದ್ದು, ಆ.1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಆದರೆ, ಈಗಾಗಲೇ ಕೆಲ ಹೋಟೆಲ್ ಹಾಗೂ ದರ್ಶಿನಿಗಳು ಸ್ವಯಂ ಪ್ರೇರಿತವಾಗಿ ದರ ಏರಿಕೆ ಮಾಡಿವೆ. ಇದರಿಂದಾಗಿ ಕಾಫಿ, ಚಹದ ಬೆಲೆ ಸರಾಸರಿ ₹ 15ರಿಂದ ₹ 20ಕ್ಕೆ ತಲುಪಿದೆ. ಅದೇ ರೀತಿ, ಹಲವೆಡೆ ದಕ್ಷಿಣ ಭಾರತದ ಊಟದ ಬೆಲೆಯೂ ₹ 100ರ ಗಡಿ ದಾಟಿದೆ.

ಈಗ ದರ ಏರಿಕೆಯಿಂದ ಊಟದ ಬೆಲೆಯಲ್ಲಿ ₹ 10 ಹೆಚ್ಚಳವಾದರೆ, ತಿಂಡಿ ಬೆಲೆಯಲ್ಲಿ ₹ 5 ಏರಿಕೆಯಾಗಲಿದೆ. ಕಾಫಿ, ಚಹದ ಬೆಲೆ ₹ 2ರಿಂದ ₹ 3 ಹೆಚ್ಚಳವಾಗಲಿದೆ. ಹೋಟೆಲ್‌ಗಳ ಸಂಘದ ಈ ನಿರ್ಧಾರಕ್ಕೆ ಗ್ರಾಹಕರು ಸರ್ಕಾರಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರ ಕಡಿವಾಣ ಹಾಕಬೇಕಿತ್ತು. ಆದರೆ, ಈ ಬಗ್ಗೆ ಕ್ರಮ ವಹಿಸದಿರುವುದರಿಂದ ಹೋಟೆಲ್‌ಗಳು ಬೆಲೆ ಹೆಚ್ಚಿಸುತ್ತಿವೆ. ಹೋಟೆಲ್‌ ತಿಂಡಿ–ತಿನಿಸು ಹಾಗೂ ಊಟವನ್ನು ಅವಲಂಬಿಸಿರುವ ಬಡ–ಮಧ್ಯಮ ವರ್ಗದವರಿಗೆ ಶೇ 10 ರಷ್ಟು ಬೆಲೆ ಏರಿಕೆಯು ಕಷ್ಟವಾಗಲಿದೆ. ಹೀಗಾಗಿ, ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಶೇ 5 ರಷ್ಟು ಹೆಚ್ಚಿಸುವುದು ಉತ್ತಮ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಬೇಳೆ ಕಾಳುಗಳು ಸೇರಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. 

ADVERTISEMENT

ಆತಿಥ್ಯ ಉದ್ಯಮ ಚೇತರಿಕೆ: 2020ರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಆತಿಥ್ಯ ಉದ್ಯಮಕ್ಕೆ ಹೊಡೆತ ಬಿದ್ದು, ಎರಡು ವರ್ಷಗಳು ಹೋಟೆಲ್ ವಹಿವಾಟು ಕುಸಿತ ಕಂಡಿತ್ತು. ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಲಾಗಿತ್ತು. ಆ ಅವಧಿಯಲ್ಲಿ ಬಾಡಿಗೆ ಪಾವತಿ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಲಾಗದೆಯೇ ನಗರದಲ್ಲಿ ಸಾವಿರಕ್ಕೂ ಅಧಿಕ ಹೋಟೆಲ್‌ಗಳು ಶಾಶ್ವತವಾಗಿ ಬಾಗಿಲು ಮುಚ್ಚಿದ್ದವು. 60 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಕಳೆದ ವರ್ಷಾರಂಭದಿಂದ ಹೋಟೆಲ್ ಉದ್ಯಮ ಚೇತರಿಕೆ ಹಾದಿ ಹಿಡಿದಿದ್ದು, ಈಗ ಕೋವಿಡ್ ಪೂರ್ವದ ಸ್ಥಿತಿ ತಲುಪಿದೆ. 

ಕೋವಿಡ್ ನಿಯಂತ್ರಣದ ಬಳಿಕ ಸಂಘವು ತಿಂಡಿ–ತಿನಿಸುಗಳ ದರ ಪರಿಷ್ಕರಣೆ ಮಾಡಿತ್ತು. ಊಟದ ದರದಲ್ಲಿ ₹ 10 ಹಾಗೂ ತಿಂಡಿ–ತಿನಿಸುಗಳ ದರದಲ್ಲಿ ₹ 5 ಹೆಚ್ಚಳವಾಗಿತ್ತು. ಚಹ, ಕಾಫಿ ದರದಲ್ಲಿ ₹ 2ರಿಂದ ₹ 3 ಹೆಚ್ಚಳ ಮಾಡಿತ್ತು. ಆದರೆ, ಕೆಲ ಹೋಟೆಲ್‌ಗಳು ಒಂದೂರೆ ವರ್ಷದಲ್ಲಿ ಎರಡು ಮೂರು ಬಾರಿ ದರ ಹೆಚ್ಚಿಸಿವೆ. 

ಅಂಕಿ–ಅಂಶಗಳು

* 24,500: ನಗರದಲ್ಲಿರುವ ಒಟ್ಟು ಹೋಟೆಲ್‌ಗಳು

* 21,000: ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಹೋಟೆಲ್‌ಗಳು

* 3,500: ನಗರದಲ್ಲಿರುವ ತಾರಾ (ಸ್ಟಾರ್) ಹೋಟೆಲ್‌ಗಳು

* 1.40: ಲಕ್ಷ ಆತಿಥ್ಯ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು

ತರಕಾರಿ ಸೇರಿ ವಿವಿಧ ದಿನಬಳಕೆ ವಸ್ತುಗಳ ಬೆಲೆ ಇಳಿಕೆಗೆ ಸರ್ಕಾರ ಕ್ರಮವಹಿಸಬೇಕು. ಒಮ್ಮೆಲೆಯೇ ಶೇ 10 ರಷ್ಟು ದರ ಹೆಚ್ಚಳ ಮಾಡಬಾರದು.
ಭಾಗೀರತಿ ರಾಜರಾಜೇಶ್ವರಿ ನಗರ
ಹತ್ತು ವರ್ಷಗಳಿಂದ ಸಂಪಾದನೆಯಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಆದರೆ ಬೇರೆ ಎಲ್ಲದರ ಬೆಲೆ ಏರಿದೆ. ಮೂರು ವರ್ಷಗಳ ಹಿಂದೆ ₹ 20 ಇದ್ದ ಮಸಾಲೆ ಪುರಿ ಈಗ ₹ 40 ಆಗಿದೆ.
ವಿನಯ್ ನಗರಪೇಟೆ
ತಿಂಡಿ ತಿನಿಸುಗಳ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಿದರೆ ಬಡ ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಶೇ 5 ರಷ್ಟು ಹೆಚ್ಚಿಸುವುದು ಉತ್ತಮ.
ರೇಖಾ ವಿಜಯನಗರ
ಹಾಲು ಅಕ್ಕಿ ವಿವಿಧ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ಹೋಟೆಲ್‌ಗಳು ಆ ಹೊರೆಯನ್ನು ನಮ್ಮ ಮೇಲೆ ಹಾಕುತ್ತಿವೆ.
ಭಾಸ್ಕರ್ ಬಿಟಿಎಂ ಬಡಾವಣೆ
ಬೆಂಗಳೂರು ಉತ್ತರಕ್ಕೆ ಹೋಲಿಸಿದರೆ ದಕ್ಷಿಣದಲ್ಲಿನ ಹೋಟೆಲ್‌ಗಳಲ್ಲಿ ಬೆಲೆ ಸ್ವಲ್ಪ ಕಡಿಮೆಯಿದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮವಹಿಸಬೇಕು.
ಬದ್ರಿ ಬಸವನಗುಡಿ
Quote - ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಕಾಫಿ–ಚಹ ಪುಡಿಯ ಬೆಲೆಯೂ ಏರಿಕೆಯಾಗಿದೆ. ಆದ್ದರಿಂದ ದರ ಹೆಚ್ಚಳ ಮಾಡುವುದು ಅನಿವಾರ್ಯ.
ಪಿ.ಸಿ. ರಾವ್  ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ

‘ದರ ಹೆಚ್ಚಳ ಅನಿವಾರ್ಯ’

‘ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ತಿಂಡಿ ತಿನಿಸುಗಳ ದರ ಏರಿಕೆ ಅನಿವಾರ್ಯವಾಗಿದೆ. ಜೀರಿಗೆ ದರ ಕೆ.ಜಿ.ಗೆ ₹ 240ರಿಂದ ₹ 560ಕ್ಕೆ ಏರಿಕೆಯಾಗಿದೆ. ಬ್ಯಾಡಗಿ ಮೆಣಸು ₹ 300ರಿಂದ ₹ 800ಕ್ಕೆ ತಲುಪಿದೆ. ತರಕಾರಿಗಳ ಬೆಲೆ ಶೇ 40 ರಷ್ಟು ಹೆಚ್ಚಳವಾಗಿದೆ. ₹ 300 ಇದ್ದ ಕಾಫಿ ಪುಡಿ ದರ ಈಗ ₹ 600ಕ್ಕೆ ತಲುಪಿದೆ. ಇದೇ ರೀತಿ ಹಾಲು ಅಕ್ಕಿ ಎಲ್ಲ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಆದ್ದರಿಂದ ದರ ಹೆಚ್ಚಿಸುತ್ತಿದ್ದೇವೆ. ಇದು ಗ್ರಾಹಕರಿಗೂ ಅರ್ಥವಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ದರ ಹೆಚ್ಚಿಸಿರಲಿಲ್ಲ’ ಎಂದು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನ ಮಾಲೀಕ ಎಸ್‌.ಪಿ. ಕೃಷ್ಣರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.