ಬೆಂಗಳೂರು: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿದ ಗೀತೆಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ನೆರೆದಿದ್ದವರನ್ನು ಭಾವಪರವಶಗೊಳಿಸಿದರೆ, ಅವರ ಒಡನಾಡಿಗಳು ಕನ್ನಡ ಕಾವ್ಯ ಪರಂಪರೆಗೆ ‘ಎಚ್ಚೆಸ್ವಿ’ ನೀಡಿದ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು.
ಕಪ್ಪಣ್ಣ ಅಂಗಳ ಹಾಗೂ ಸಮಂಜಸ ಬೆಂಗಳೂರು ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಕಾಮಧೇನು ಎಚ್ಎಸ್‌ವಿ’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಗೀತ ಗೌರವ ಹಾಗೂ ನುಡಿ ನಮನ ಸಲ್ಲಿಸಲಾಯಿತು.
ಕವಿ ಬಿ.ಆರ್. ಲಕ್ಷ್ಮಣ ರಾವ್, ‘ವೆಂಕಟೇಶಮೂರ್ತಿ ಅವರು ಕೇವಲ ಭಾವಗೀತೆ ಕವಿಯಾಗದೆ, ಕನ್ನಡದ ಶ್ರೇಷ್ಠ ಕವಿಯಾಗಿದ್ದಾರೆ. ಸತ್ವಯುಕ್ತ ಮತ್ತು ಸಂಮೃದ್ಧವಾದ ಕಾವ್ಯ ಅವರದ್ದಾಗಿದೆ. ಕನ್ನಡ ಕಾವ್ಯಕ್ಕೆ ಅವರು ಅಕ್ಷಯಪಾತ್ರೆಯಾಗಿದ್ದು, ಕನ್ನಡ ಭಾಷೆ ಇರುವವರೆಗೆ ಅವರು ಇರುತ್ತಾರೆ’ ಎಂದು ಹೇಳಿದರು.
ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಪುತಿನ ಅವರ ಭಾಗವತ ಪ್ರಜ್ಞೆ, ಕುವೆಂಪು ಅವರ ಭಾವ ಶಕ್ತಿ ಗ್ರಹಿಕೆ, ಬೇಂದ್ರೆ ಅವರ ನಾದ ಗುಣವನ್ನು ವೆಂಕಟೇಶಮೂರ್ತಿ ಮೈಗೂಡಿಸಿಕೊಂಡಿದ್ದರು. ಅವರು ಕಾವ್ಯ ಪ್ರತಿಭೆಯ ಪರಮೋಚ್ಚ ಜ್ಯೋತಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಲಸ್ರಾಡೊ, ‘ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು, ಮೂರು ದಶಕಗಳ ಕಾಲ ನಮ್ಮ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಶುದ್ಧ ಸಾಹಿತಿ: ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾಕೃಷ್ಣ, ‘ಎಚ್ಚೆಸ್ವಿ ಅವರು ಅಚ್ಚಳಿಯದ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಪರಿಶುದ್ಧ ಸಾಹಿತಿಯಾಗಿ ಗುರುತಿಸಿಕೊಂಡರು. ಭಾವವನ್ನು ಸ್ಪರ್ಶಿಸುತ್ತಾ, ಚಿಂತನೆಗೆ ಹಚ್ಚಿದ ಕವಿ ಅವರು’ ಎಂದರು.
ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು, ಸ್ವಂತ ಪ್ರತಿಭೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಜ್ವಲಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಅವರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.
ರಂಗಕರ್ಮಿ ಬಿ.ಜಯಶ್ರೀ ಅವರು ವೆಂಕಟೇಶಮೂರ್ತಿ ಅವರಿಗೆ ರಂಗ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.